the file
No Result
View All Result
Subscribe to get Updates
  • Home
  • CBI/CID
  • RTI
  • GOVERNANCE
  • IT/ED
  • LEGISLATURE
  • LOKAYUKTA
  • About Us
  • Contact Us
  • Kannada Version
  • Home
  • CBI/CID
  • RTI
  • GOVERNANCE
  • IT/ED
  • LEGISLATURE
  • LOKAYUKTA
  • About Us
  • Contact Us
  • Kannada Version
The File
No Result
View All Result
Home GOVERNANCE

ಕಾಂಗ್ರೆಸ್‌ ಸರ್ಕಾರದಿಂದ ‘ಕಾಂಗ್ರೆಸ್‌ ಭವನ ಟ್ರಸ್ಟ್‌’ಗೆ ಸರ್ಕಾರಿ ಜಾಗ; ಹಿತಾಸಕ್ತಿ ಸಂಘ‍ರ್ಷದ ಸುಳಿಯಲ್ಲಿ ಸಿಎಂ, ಡಿಸಿಎಂ

thefilestack by thefilestack
August 18, 2025
in GOVERNANCE
0
0
SHARES
7
VIEWS
Share on FacebookShare on Twitter

ಬೆಂಗಳೂರು;  ರಾಜ್ಯ ಕಾಂಗ್ರೆಸ್‌ ಸರ್ಕಾರವು ನಗರಾಭಿವೃದ್ಧಿ, ಪೌರಾಡಳಿತ, ಕಂದಾಯ ಮತ್ತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ಇಲಾಖೆ ಸೇರಿದಂತೆ ಇನ್ನಿತರೆ ಇಲಾಖೆಗಳ ವಶ ಅಥವಾ ಸ್ವಾಧೀನದಲ್ಲಿರುವ ಸರ್ಕಾರಿ ಜಾಗಗಳನ್ನು ಕಾಂಗ್ರೆಸ್‌ ಭವನ ಟ್ರಸ್ಟ್‌ಗೆ ಮಂಜೂರು ಮಾಡುತ್ತಿರುವ ಪ್ರಕರಣದಲ್ಲಿ  ಹಿತಾಸಕ್ತಿ ಸಂಘರ್ಷ ಎದುರಾಗಿದೆ.

 

ರಾಜ್ಯಾದಾದ್ಯಂತ 100 ನೂತನ ಕಾಂಗ್ರೆಸ್‌ ಕಚೇರಿ ನಿರ್ಮಾಣಕ್ಕೆ ಶಂಕು ಸ್ಥಾಪನೆ ನೆರವೇರಿಸಲು ಕಾಂಗ್ರೆಸ್‌ ಪಕ್ಷ ಮುಂದಾಗಿದೆ. ಆದರೆ ಇದುವರೆಗೂ 50 ಕಡೆಯೂ ಸ್ಥಳ ಅಂತಿಮವಾಗಿಲ್ಲ ಎಂದು ಡಿಸಿಎಂ ಶಿವಕುಮಾರ್‍‌  ಇತ್ತೀಚೆಗೆ ಕಾಂಗ್ರೆಸ್‌ ಶಾಸಕಾಂಗದ ಪಕ್ಷದ ಸಭೆಯಲ್ಲಿ  ಅಸಮಾಧಾನ ಹೊರಹಾಕಿದ್ದರು. ಇದರ ಬೆನ್ನಲ್ಲೇ ಕಾಂಗ್ರೆಸ್‌ ಭವನದ ನೂತನ ಟ್ರಸ್ಟಿಗಳ ವಿರುದ್ಧ ಹಿತಾಸಕ್ತಿ ಸಂಘರ್ಷದ ಆರೋಪವು ಕೇಳಿ ಬಂದಿದೆ.

 

ಕಾಂಗ್ರೆಸ್‌ ಭವನ ಟ್ರಸ್ಟ್‌ಗೆ ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ (ಕೆಪಿಸಿಸಿ) ಅಧ್ಯಕ್ಷರೂ ಆಗಿರುವ  ಡಿ ಕೆ ಶಿವಕುಮಾರ್ ಅವರು ಅಧ್ಯಕ್ಷರಾಗಿದ್ದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಟ್ರಸ್ಟಿಯಾಗಿದ್ದಾರೆ. ಉಳಿದಂತೆ ರಣದೀಪ್‌ ಸಿಂಗ್‌ ಸುರ್ಜೆವಾಲಾ, ವಿನಯ್‌ ಕಾರ್ತಿಕ್‌, ವಿಜಯ್‌ ಕೆ ಮುಳಗುಂದ್‌ ಅವರು ಟ್ರಸ್ಟಿಗಳಾಗಿದ್ದಾರೆ.

 

ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್‍‌ ಅವರು ಟ್ರಸ್ಟಿಗಳಾಗಿರುವ ಕಾಂಗ್ರೆಸ್‌ ಭವನ ಟ್ರಸ್ಟ್‌ಗೆ ಸರ್ಕಾರದ ವಿವಿಧ ಇಲಾಖೆಗಳ ವಶದಲ್ಲಿರುವ ಸರ್ಕಾರಿ ಜಾಗಗಳನ್ನು ಮಂಜೂರು ಮಾಡಲಾಗುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದಿರುವ ಇತ್ತೀಚಿನ ಹಲವು  ಸಚಿವ ಸಂಪುಟ ಸಭೆಗಳಲ್ಲಿ ಮತ್ತೊಬ್ಬ ಟ್ರಸ್ಟಿ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್‍‌ ಅವರೂ ಸಹ ಭಾಗಿಯಾಗಿದ್ದರು. ಇವರಿಬ್ಬರೂ ಭಾಗಿಯಾಗಿರುವ ಸಚಿವ ಸಂಪುಟ ಸಭೆಗಳಲ್ಲೇ ಕಾಂಗ್ರೆಸ್‌ ಭವನ ಟ್ರಸ್ಟ್‌ಗೆ ಸರ್ಕಾರಿ ಜಾಗಗಳನ್ನು ಮಂಜೂರು ಮಾಡಿರುವುದರಿಂದ  ಹಿತಾಸಕ್ತಿ ಸಂಘರ್ಷ ಎದುರಾಗಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ.

 

ಕಾಂಗ್ರೆಸ್‌ ಭವನ ಟ್ರಸ್ಟ್‌ಗೆ ಗೋಮಾಳ ಸೇರಿದಂತೆ ಇನ್ನಿತರೆ ಜಮೀನುಗಳನ್ನು ಹಂಚಿಕೆ ಮಾಡುತ್ತಿರುವ ಕುರಿತು  ಚಿಕ್ಕನಾಯಕನಹಳ್ಳಿ ಕ್ಷೇತ್ರದ ಶಾಸಕ ಸುರೇಶ್‌ ಬಾಬು ಮತ್ತು ತುಮಕೂರು ಗ್ರಾಮಾಂತರ ಕ್ಷೇತ್ರದ ಶಾಸಕ ಸುರೇಶ್‌ ಗೌಡ ಅವರು ವಿಧಾನಸಭೆ ಅಧಿವೇಶನ (2025ರ ಆಗಸ್ಟ್‌ 18)ದಲ್ಲಿ ಪ್ರಸ್ತಾಪಿಸಿರುವ ಬೆನ್ನಲ್ಲೇ  ಕಾಂಗ್ರೆಸ್‌ ಭವನದ ಟ್ರಸ್ಟ್‌, ಟ್ರಸ್ಟಿಗಳ ಹೆಸರುಗಳು  ಮುನ್ನೆಲೆಗೆ ಬಂದಿವೆ.

 

ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ಟ್ರಸ್ಟ್‌ನಲ್ಲಿರುವ ʻಕಾಂಗ್ರೆಸ್‌ ಭವನ ಟ್ರಸ್ಟ್‌ʼನ ಡೀಡ್‌, ‘ದಿ ಫೈಲ್‌’ಗೆ ಲಭ್ಯವಾಗಿವೆ.

 

ಟ್ರಸ್ಟ್‌ನ ಇತಿಹಾಸ

 

ರಾಜ್ಯದಲ್ಲಿ 1993ರ ಜೂನ್‌ 13ರಂದು  ಕಾಂಗ್ರೆಸ್‌ ಭವನ ಟ್ರಸ್ಟ್‌ ಅಸ್ತಿತ್ವಕ್ಕೆ ಬಂದಿತ್ತು. ಆಗ ಕೆಪಿಸಿಸಿ ಅಧ್ಯಕ್ಷರಾಗಿದ್ದ ವಿ ಕೃಷ್ಣರಾವ್‌ ಅವರು ಇದರ ಅಧ್ಯಕ್ಷರಾಗಿದ್ದರು. ಈ ಅವಧಿಯಲ್ಲಿ ಮುಖ್ಯಮಂತ್ರಿ ಮತ್ತು ಶಾಸಕಾಂಗ ಸಭೆಯ ನಾಯಕರಾಗಿದ್ದ ಎಂ ವೀರಪ್ಪ ಮೊಯಿಲಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ (ಪ್ರಭಾರ) ನವಲ್‌ ಕಿಶೋರ್ ಶರ್ಮ , ಕೆಪಿಸಿಸಿ ಖಜಾಂಚಿಯಾಗಿದ್ದ ಅಂದಿನ ಶಾಸಕ ಅಲ್ಲಂ ವೀರಭದ್ರಪ್ಪ, ಪಕ್ಷದ ಮತ್ತೊಬ್ಬ ಪ್ರಧಾನ ಕಾರ್ಯದರ್ಶಿ ಎನ್‌ ಸಿ ಮಧುರಾಜು ಅವರು ಇತರೆ ಟ್ರಸ್ಟಿಗಳಾಗಿದ್ದರು.

 

 

ಟ್ರಸ್ಟ್‌ನ ಮೂಲೋದ್ದೇಶವೇನು?

 

ಕಾಂಗ್ರೆಸ್‌ ಕಚೇರಿಗಳನ್ನು ನಿರ್ಮಾಣ ಮಾಡಲು  ಬೆಂಗಳೂರು ಮತ್ತಿತರ ನಗರ ಪ್ರದೇಶಗಳಲ್ಲಿ ಸೂಕ್ತ ಜಾಗ, ನಿವೇಶನ ಅಥವಾ ಆಸ್ತಿಯನ್ನು ಸ್ವಾಧೀನಪಡಿಸಿಕೊಂಡು ಸ್ವಂತ ಕಚೇರಿಗಳನ್ನು ನಿರ್ಮಿಸುವುದು. ಕಾಂಗ್ರೆಸ್‌ನ  ಆದರ್ಶ, ಚಿಂತನೆಗಳನ್ನು ಉತ್ತೇಜಿಸಲು ಮತ್ತು ಪ್ರಚಾರ ಮಾಡುವುದು, ಕಾಂಗ್ರೆಸ್‌ ಕಾರ್ಯಕರ್ತರಿಗಾಗಿ   ವಿಚಾರ ಸಂಕಿರಣ, ಸಮ್ಮೇಳನ, ಕಾರ್ಯಾಗಾರ, ಉಪನ್ಯಾಸ, ಚರ್ಚಾಗೋಷ್ಠಿ, ಶಿಬಿರ ಏರ್ಪಡಿಸುವುದು, ಕಾಂಗ್ರೆಸ್ಸಿಗರಿಗೆ ಪುನಶ್ಚೇತನ ತರಬೇತಿ,ಕೋರ್ಸ್‌ಗಳನ್ನು ಆರಂಭಿಸುವುದು, ಶೈಕ್ಷಣಿಕ ಸಂಸ್ಥೆ, , ಹಾಸ್ಟೆಲ್‌, ವಾಚನಾಲಯ, ಗ್ರಂಥಾಲಯಗಳನ್ನು ಆರಂಭಿಸುವುದು ಟ್ರಸ್ಟ್‌ನ ಮೂಲ ಉದ್ದೇಶವಾಗಿದೆ ಎಂಬುದು ಈ  ಡೀಡ್‌ನಿಂದ ತಿಳಿದು ಬಂದಿದೆ.

 

 

ಅದೇ ರೀತಿ ಕಾಂಗ್ರೆಸ್‌ನ ಪದಾಧಿಕಾರಿಗಳಿಗೆ ವಾಸ್ತವ್ಯ, ತಂಗಲು ವಸತಿ ವ್ಯವಸ್ಥೆ ಕಲ್ಪಿಸುವುದು, ನಿಯತಕಾಲಿಕೆ, ದಿನ ಪತ್ರಿಕೆ, ಮ್ಯಾಗ್‌ಜಿನ್‌ ಗಳನ್ನು ಆರಂಭಿಸುವುದು, ಆಡಿಯೋ ವಿಡಿಯೋ ಧ್ವನಿ ಮುದ್ರಣ, ಸಂಕಲನ, ಸಾಮಾಜಿಕ, ಶೈಕ್ಷಣಿಕ ಮತ್ತು ರಾಜಕೀಯ, ಕ್ರೀಡಾ ಚಟುವಟಿಕೆಗಳನ್ನು ಸಂಘಟಿಸುವ ಉದ್ದೇಶವನ್ನೂ ಈ ಟ್ರಸ್ಟ್‌ ಹೊಂದಿದೆ.

 

ಹಾಗೆಯೇ ಸರ್ಕಾರಿ ಸಂಸ್ಥೆ, ಕಾರ್ಪೋರೇಷನ್‌, ಮುನಿಸಿಪಾಲಿಟಿ, ಸೊಸೈಟಿ, ವ್ಯಕ್ತಿ, ಕಂಪನಿ, ನಿಗಮ,  ಕೊಡುಗೆ, ವಿನಿಮಯ, ಸ್ಥಳೀಯ ಸಂಸ್ಥೆಗಳಿಂದ ಜಾಗವನ್ನು ಖರೀದಿಸುವುದು, ಮಂಜೂರು ಮಾಡಿಸಿಕೊಳ್ಳುವುದು, ಸ್ಥಿರ ಮತ್ತು ಚರಾಸ್ತಿಗಳನ್ನು ಹೊಂದುವುದು, ಟ್ರಸ್ಟ್‌ನ ಉದ್ದೇಶಗಳಿಗಾಗಿ  ಕಟ್ಟಡ ನಿರ್ಮಾಣ, ರಚನೆ, ಅಭಿವೃದ್ಧಿ, ದುರಸ್ತಿ ಮಾಡುವ ಉದ್ದೇಶವೂ ಇದೆ.

 

ಇತ್ತೀಚೆಗಷ್ಟೇ ಈ ಟ್ರಸ್ಟ್‌ಗೆ ಹೊಸ ಮಂಡಳಿಯನ್ನು ರಚಿಸಲಾಗಿದೆ.

 

ಹೊಸ ಮಂಡಳಿಯಲ್ಲಿ ಯಾರ್ಯಾರಿದ್ದಾರೆ?

 

ಪ್ರದೇಶ ಕಾಂಗ್ರೆಸ್‌ ಸಮಿತಿಯ ಅಧ್ಯಕ್ಷ ಹಾಗೂ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್‍‌ ಟ್ರಸ್ಟ್‌ನ ನೂತನ ಅಧ್ಯಕ್ಷರಾಗಿದ್ದಾರೆ. ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ, ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್‌ ಸಿಂಗ್‌ ಸುರ್ಜೆವಾಲಾ, ಕಾಂಗ್ರೆಸ್‌ನ ಖಜಾಂಚಿ ವಿನಯ್‌ ಕಾರ್ತಿಕ್‌, ಕೆಪಿಸಿಸಿ (ಆಡಳಿತ) ಪ್ರಧಾನ ಕಾರ್ಯದರ್ಶಿ ವಿಜಯ್‌ ಕೆ ಮುಳುಗಂದ್‌ ಅವರು ಇತರೆ ಟ್ರಸ್ಟಿಗಳಾಗಿರುವುದು ಗೊತ್ತಾಗಿದೆ.

 

 

ನಗರ ಸ್ಥಳೀಯ ಸಂಸ್ಥೆಗಳಿಗೆ ಸೇರಿದ ಜಾಗವನ್ನು ಸಾರ್ವಜನಿಕ ಹರಾಜು ಪ್ರಕ್ರಿಯೆಯ ಮೂಲಕವೇ ವಿಲೇ ಮಾಡಬೇಕು ಎಂದು 2003ರಲ್ಲಿಯೇ ಸರ್ಕಾರವು ಮಾರ್ಗಸೂಚಿ ಹೊರಡಿಸಿದ್ದರೂ ಸಹ ಅದನ್ನು ಬದಿಗೊತ್ತಿರುವ ರಾಜ್ಯ ಕಾಂಗ್ರೆಸ್‌ ಸರ್ಕಾರ, ʻಕಾಂಗ್ರೆಸ್‌ ಭವನ ಟ್ರಸ್ಟ್‌ʼ ಗೆ ಬಹುಕೋಟಿ ಬೆಲೆಬಾಳುವ ಎಕರೆಗಟ್ಟಲೇ ಜಾಗವನ್ನು ಚಿಲ್ಲರೆ ದರಕ್ಕೆ ಮಂಜೂರು ಮಾಡುತ್ತಿದೆ.

 

 

ತುಮಕೂರು ಮಹಾನಗರ ಪಾಲಿಕೆಯ ಸುಪರ್ದಿಯಲ್ಲಿರುವ ಬಹು ಕೋಟಿ ಬೆಲೆಬಾಳುವ ಒಟ್ಟು ಜಮೀನಿನ ಪೈಕಿ 2 ಎಕರೆ ಜಾಗವನ್ನು ಸಾರ್ವಜನಿಕ ಹರಾಜು ನಡೆಸದೇ ನೇರವಾಗಿ ಕಾಂಗ್ರೆಸ್‌ ಭವನ ಟ್ರಸ್ಟ್‌ಗೆ ಮಂಜೂರು ಮಾಡಿ ಆದೇಶ ಹೊರಡಿಸಿದೆ. ಅಲ್ಲದೇ ಈ ಜಾಗವು ವ್ಯಾಜ್ಯದಿಂದ ಕೂಡಿದೆಯಲ್ಲದೇ  ನ್ಯಾಯಾಲಯದಲ್ಲಿ ಅಸಲು ದಾವೆ ಅರ್ಜಿಯ ವಿಚಾರಣೆಯು ಇನ್ನೂ ಇತ್ಯರ್ಥಗೊಂಡಿಲ್ಲ. ಆದರೂ ಸಹ ಕಾಂಗ್ರೆಸ್‌ ಭವನ ಟ್ರಸ್ಟ್‌ಗೆ 2 ಎಕರೆ ಜಮೀನು ಮಂಜೂರು ಮಾಡಲು  ಸಚಿವ ಸಂಪುಟವು  ತೀರ್ಮಾನ ತೆಗೆದುಕೊಂಡಿದೆ.

 

ನಿರ್ದಿಷ್ಟವಾಗಿ ತುಮಕೂರು ಪ್ರಕರಣವನ್ನು ತುಮಕೂರು ಗ್ರಾಮಾಂತರ ವಿಧಾನಸಭೆ ಕ್ಷೇತ್ರದ ಶಾಸಕ ಸುರೇಶ್‌ ಗೌಡ ಅವರು ವಿಧಾನಸಭೆ ಅಧಿವೇಶನದಲ್ಲಿ (2025ರ ಆಗಸ್ಟ್‌ 18) ಪ್ರಸ್ತಾಪಿಸಿದ್ದಾರೆ.

 

https://stack.thefile.in/2025/08/governance/33801/

ತುಮಕೂರಿನಲ್ಲಿ ಕಾಂಗ್ರೆಸ್‌ ಭವನ ಟ್ರಸ್ಟ್‌ಗೆ ಜಮೀನು ಮಂಜೂರು ಮಾಡಬೇಕು ಎಂದು ಗೃಹ ಸಚಿವ ಡಾ ಜಿ ಪರಮೇಶ್ವರ್‍‌ ಅವರು ನಗರಾಭಿವೃದ್ದಿ ಇಲಾಖೆಗೆ ಪತ್ರ ಬರೆದಿದ್ದರು.  ಈ ಜಮೀನಿಗೆ ಸಂಬಂಧಿಸಿದಂತೆ ತುಮಕೂರು ಮಹಾನಗರಪಾಲಿಕೆಯು ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿತ್ತು. ಈ ಜಮೀನು ವ್ಯಾಜ್ಯದಿಂದ ಕೂಡಿರುವುದರ ಬಗ್ಗೆ ಮತ್ತು ಮಂಜೂರಾತಿಗೆ ಸಂಬಂಧಿಸಿದಂತೆ ಸರ್ಕಾರವು ಈ ಹಿಂದೆ ಹೊರಡಿಸಿದ್ದ ಮಾರ್ಗಸೂಚಿಗಳ ಬಗ್ಗೆ ವರದಿಯಲ್ಲಿ ಗಮನ ಸೆಳೆಯಲಾಗಿತ್ತು. ಆದರೂ ಸರ್ಕಾರ ಇದನ್ನು ಪರಿಗಣಿಸದೇ ಜಮೀನು ಮಂಜೂರು ಮಾಡುವ ತೀರ್ಮಾನ ತೆಗೆದುಕೊಂಡಿದೆ.

 

 

 

 

ವ್ಯಾಜ್ಯದ ಜಮೀನಿದು!

 

ತುಮಕೂರು ತಾಲೂಕು ಕಸಬಾ ದಕ್ಷಿಣ ಹೋಬಳಿ ಮರಳೂರು ಗ್ರಾಮದ ಸರ್ವೆ ನಂಬರ್‍‌ 87/1 ಮತ್ತು 82/2ರಲ್ಲಿನ ಒಟ್ಟು 4 ಎಕರೆ ವಿಸ್ತೀರ್ಣದ ಜಮೀನು ಇದಾಗಿದೆ. ಇದನ್ನು 1943ರಲ್ಲಿ For Dumping Street Sweeping Night Soil ಉದ್ದೇಶಕ್ಕೆ ತುಮಕೂರು ಮುನ್ಸಿಪಾಲಿಟಿಗೆ ಭೂ ಸ್ವಾಧೀನವಾಗಿತ್ತು.  ಪಹಣಿಯು ತುಮಕೂರು ಮಹಾನಗರ ಪಾಲಿಕೆಯ ಹೆಸರಿನಲ್ಲಿದೆ. ಪ್ರಸ್ತುತ ಸರ್ವೆ ನಂಬರ್‍‌ 87/2ರಲ್ಲಿನ 2 ಎಕರೆ ವಿಸ್ತೀರ್ಣದ ಜಮೀನು ಮಾಲೀಕತ್ವದ ಬಗ್ಗೆ ಗಂಗಮ್ಮ ಮತ್ತಿತರರು ತುಮಕೂರು ಪಾಲಿಕೆ ವಿರುದ್ಧ 3ನೇ ಹೆಚ್ಚುವರಿ ಸಿವಿಲ್‌ ನ್ಯಾಯಾಲಯದಲ್ಲಿ ಅಸಲು ದಾವೆ (O S 426/2015) (ಎಂ ಎ ಪ್ರಕರಣ ಸಂಖ್ಯೆ 19/2023) ಹೂಡಿದ್ದರು ಎಂದು ವರದಿಯಲ್ಲಿ ವಿವರಿಸಿತ್ತು.

 

 

 

ಕಾಂಗ್ರೆಸ್‌ ಭವನ ಟ್ರಸ್ಟ್‌ಗೆ 2 ಎಕರೆ ಮಂಜೂರು ಮಾಡುವ ಹೊತ್ತಿನಲ್ಲಿ ಈ ಪ್ರಕರಣವು ವಿಚಾರಣೆ ಹಂತದಲ್ಲಿತ್ತು. ಸದ್ಯ ಈ ಪ್ರಕರಣದ ವಿಚಾರಣೆಯು 2025ರ ಆಗಸ್ಟ್‌ 20ರಂದು ನಿಗದಿಯಾಗಿದೆ. ಇಲ್ಲಿಯವರೆಗೂ ನ್ಯಾಯಾಲಯವು ತಡೆಯಾಜ್ಞೆ ನೀಡಿಲ್ಲ.

 

ಚಿಲ್ಲರೆ ದರಕ್ಕೆ ಮಂಜೂರು

 

ಕಾಂಗ್ರೆಸ್‌ ಭವನ ಟ್ರಸ್ಟ್‌ಗೆ ಮಂಜೂರಾಗಿರುವ ಜಾಗಕ್ಕೆ 2023-24ನೇ ಸಾಲಿನ ಮಾರ್ಗಸೂಚಿ ಮೌಲ್ಯವು ಎಕರೆಗೆ 1.70 ಕೋಟಿ ರು ಇದೆ. 2 ಎಕರೆಗೆ ಮಾರ್ಗಸೂಚಿ ಮೌಲ್ಯದ ಪ್ರಕಾರವೇ 3.4 ಕೋಟಿ ರು ಬೆಲೆಬಾಳಲಿದೆ. ಇನ್ನು ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದನೆ ಪಡೆದಿದ್ದರೇ 2 ಎಕರೆಗೆ (30,000 ಸ್ಕೈಯರ್‍‌ ಫೀಟ್‌) ಮಾರ್ಗಸೂಚಿ ಬೆಲೆಯಂತೆ 2,780 ರು ನಂತೆ ಲೆಕ್ಕ ಹಾಕಿದರೇ ಅಂದಾಜು 12 ಕೋಟಿ ರು ಆಗಲಿದೆ.

 

ಮುಕ್ತ ಮಾರುಕಟ್ಟೆಯಲ್ಲಿರುವ 4,500 ರು ನಂತೆ ಲೆಕ್ಕ ಹಾಕಿದರೇ ಎಕರೆಗೆ 8 ಕೋಟಿ ಆಗಲಿದೆ. ಈ 2 ಎಕರೆ ಜಮೀನು,  16 ಕೋಟಿ ಬೆಲೆಬಾಳಲಿದೆ.

 

 

ಹೀಗೆ ಬಹುಕೋಟಿಯಷ್ಟು ಬೆಲೆ ಬಾಳುವ ಈ ಜಮೀನನ್ನು ಮಾರ್ಗಸೂಚಿ ಮೌಲ್ಯದ ಕೇವಲ ಶೇ.5ರಷ್ಟು ಅಂದರೇ 90 ಲಕ್ಷ ರು ದರ ವಿಧಿಸಿ ಈಗ ಕಾಂಗ್ರೆಸ್‌ ಪಕ್ಷಕ್ಕೆ ಮಂಜೂರು ಮಾಡಲಾಗಿದೆ. ಸಚಿವ ಸಂಪುಟವು ಕೈಗೊಂಡಿರುವ  ತೀರ್ಮಾನವು  (ಸಂಖ್ಯೆ ಸಿ; 396/2025) ಸರ್ಕಾರದ ಬೊಕ್ಕಸಕ್ಕೆ ಉಂಟಾಗಿರುವ ನಷ್ಟಕ್ಕೆ ಕಾರಣವಾಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.

 

https://stack.thefile.in/2025/07/governance/33298/

ಬೆಳಗಾವಿಯಲ್ಲಿನ  ಕಾಂಗ್ರೆಸ್‌ ಅಧಿವೇಶನಕ್ಕೆ ನೂರು ವರ್ಷಗಳಾದ ಹಿನ್ನೆಲೆಯಲ್ಲಿ  ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಪಕ್ಷವು (ಕೆಪಿಸಿಸಿ) ರಾಜ್ಯಾದ್ಯಂತ 100 ಕಾಂಗ್ರೆಸ್‌ ಭವನಗಳನ್ನು ನಿರ್ಮಾಣ ಮಾಡಲು ತೀರ್ಮಾನಿಸಿದೆ. ಕೆಪಿಸಿಸಿ ಅಧ್ಯಕ್ಷ ಹಾಗೂ  ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಈ ಸಂಬಂಧ ಪಕ್ಷಕ್ಕೆ ಗುರಿ ನೀಡಿದ್ದರು.  ಹೀಗಾಗಿ ಎಲ್ಲಾ ಸಚಿವರೂ   ನಗರ ಮತ್ತು ಗ್ರಾಮೀಣ ಸ್ಥಳೀಯ ಸರ್ಕಾರಗಳ ಅಧೀನದಲ್ಲಿರುವ ಮತ್ತು ಅವುಗಳ ಹೆಸರಿನಲ್ಲಿರುವ ಜಮೀನು, ನಿವೇಶನಗಳನ್ನು ಮಂಜೂರು ಮಾಡಿಸಿಕೊಳ್ಳಲು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದರು.

 

https://stack.thefile.in/2025/06/governance/32211/

 

ಈ ಪೈಕಿ ಮುಧೋಳ ತಾಲೂಕಿನ ಇಂಗಳಗಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಝಂಜರಕೊಪ್ಪದ ಸರ್ವೆ ನಂಬರ್‍‌ 145ರಲ್ಲಿನ (ಪ್ಲಾಟ್‌ ನಂ 81) 1077.17 ಚ ಮೀಟರ್‍‌ ಜಾಗವನ್ನು ಕಾಂಗ್ರೆಸ್‌ ಪಕ್ಷದ ಕಾರ್ಯಾಲಯಕ್ಕೆ 30 ವರ್ಷಗಳ ಗುತ್ತಿಗೆ ಆಧಾರದ ಮೇಲೆ ಮಂಜೂರು ಮಾಡಿಸಿಕೊಳ್ಳಲು ಪ್ರಸ್ತಾವಿಸಿತ್ತು.

 

ಬಾಗಲಕೋಟೆ ಜಿಲ್ಲಾ ಪಂಚಾಯ್ತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯು  ಗ್ರಾಮೀಣಾಭಿವೃದ್ಧಿ ಪಂಚಾಯತ್‌ರಾಜ್‌ ಆಯುಕ್ತಾಲಯಕ್ಕೆ ಪ್ರಸ್ತಾವವನ್ನು ಸಲ್ಲಿಸಿದ್ದರು.

 

 

 

 

30 ವರ್ಷಕ್ಕೆ ಗುತ್ತಿಗೆ ಕೋರಿ ಪ್ರಸ್ತಾವದಲ್ಲೇನಿತ್ತು?

 

ಮುಧೋಳ ತಾಲೂಕಿನ ಇಂಗಳಗಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಝಂಜರಕೊಪ್ಪದ ಜಾಗವನ್ನು ಮುಧೋಳ ಬ್ಲಾಕ್‌ ಕಾಂಗ್ರೆಸ್‌ ಪಕ್ಷದ ಕಾರ್ಯಾಲಯಕ್ಕೆ 30 ವರ್ಷಗಳ ಗುತ್ತಿಗೆ ಆಧಾರದ ಮೇಲೆ ಮಂಜೂರು ಮಾಡಬೇಕು ಎಂದು ಬಾಗಲಕೋಟೆ ಜಿಲ್ಲಾ ಪಂಚಾಯ್ತಿಗೆ ಸಲ್ಲಿಸಿದ್ದ  ಪ್ರಸ್ತಾವನೆಯನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆಯು ಪರಿಶೀಲಿಸಿತ್ತು.

 

https://stack.thefile.in/2025/06/governance/32196/

 

ಇಂಗಳಗಿ ಗ್ರಾಮ ಪಂಚಾಯ್ತಿಯ ಝಂಜರಕೊಪ್ಪದ ಸರ್ವೆ ನಂಬರ್‍‌ 145 ಪ್ಲಾಟ್‌ ನಂಬರ್‍‌ 81ರಲ್ಲಿನ 1,077.17 ಚ ಮೀ ವಿಸ್ತೀರ್ಣದ ಜಾಗದಲ್ಲಿ ಕಾಂಗ್ರೆಸ್‌ ಪಕ್ಷದ ಕಾರ್ಯಾಲಯಕ್ಕೆ ಕಟ್ಟಡ ನಿರ್ಮಾಣ ಮಾಡುವ ಉದ್ದೇಶ ಹೊಂದಿದೆ ಎಂದು ಹೇಳಿತ್ತು.  2023-24ನೇ ಸಾಲಿನ ಸ್ಥಿರಾಸ್ತಿಗಳ ಅಂದಾಜು ಸರಾಸರಿ ಮಾರುಕಟ್ಟೆ ಮೌಲ್ಯ ಮಾರ್ಗಸೂಚಿಯ ಪ್ರಕಾರ ವಸತಿ ಉದ್ದೇಶದ ಖಾಲಿ ನಿವೇಶನಕ್ಕೆ ಪ್ರತಿ ಚ ಮೀ ಗೆ 4,000 ರು ಇದೆ ಎಂದು ಲೆಕ್ಕಾಚಾರ ಮಾಡಿತ್ತು.

 

 

 

ಈ ನಿವೇಶನವನ್ನು ಪಂಚಾಯ್ತಿ ವ್ಯಾಪ್ತಿಯ ನಾಗರಿಕ ಸೌಲಭ್ಯಗಳ ಅವಶ್ಯಕತೆಗಳಿಗೆ ಕಾಯ್ದರಿಸಿಕೊಂಡಿದೆ. ಈ ನಿವೇಶನವನ್ನೇ ಕಾಂಗ್ರೆಸ್‌ ಪಕ್ಷದ ಕಾರ್ಯಾಲಯಕ್ಕೆ ನೀಡಲು ಅನುಮೋದನೆ ನೀಡಬೇಕು ಎಂದು ಸಿಇಒ ಅವರು ಪ್ರಸ್ತಾವನೆಯಲ್ಲಿ ಕೋರಿದ್ದರು.

 

30 ವರ್ಷಕ್ಕೆ ಗುತ್ತಿಗೆ ನೀಡಲು ಅವಕಾಶಗಳಿವೆಯೇ?

 

ಜಿಲ್ಲಾ, ತಾಲೂಕು ಮತ್ತು   ಗ್ರಾಮ ಪಂಚಾಯ್ತಿಗಳ ವ್ಯಾಪ್ತಿಯಲ್ಲಿ ಸ್ಥಿರ ಸ್ವತ್ತುಗಳನ್ನು ಗುತ್ತಿಗೆ ನೀಡಲು ಹಿಂದಿನ ಬಿಜೆಪಿ ಸರ್ಕಾರವು 2022ರ ನವೆಂಬರ್‍‌ 23ರಂದು ಮಾರ್ಗಸೂಚಿಗಳನ್ನು ಹೊರಡಿಸಿದೆ.  ಈ ಮಾರ್ಗಸೂಚಿಗಳ ಅನುಗುಣವಾಗಿಯೇ ಸ್ಥಿರ ಸ್ವತ್ತುಗಳನ್ನು ಗುತ್ತಿಗೆ ನೀಡಬೇಕು ಎಂದು ನಿರ್ದೇಶಿಸಿತ್ತು.

 

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಂದ ನಿರ್ವಹಿಸಲಾಗುತ್ತಿರುವ ನೋಂದಾಯಿತ ಸಂಘ ಸಂಸ್ಥೆಗಳು ನಡೆಸುವ ಶಾಲೆಗಳು, ಕಾಲೇಜುಗಳು, ಹಾಸ್ಟೆಲ್‌ಗಳು, ಅನಾಥಾಲಯಗಳು ಮತ್ತು ಸಮುದಾಯ ಭವನಗಳ ನಿರ್ಮಾಣಕ್ಕೆ ಗುತ್ತಿಗೆ ನೀಡಲು ಅವಕಾಶವಿದೆ.

 

ಅದೇ ರೀತಿ ರಾಜ್ಯ ಸರ್ಕಾರದಿಂದ ಅಂಗೀಕೃತವಾದ ಅಥವಾ ಆದಾಯ ತೆರಿಗೆ ಅಧಿನಿಯಮ 1961ರ ಕಲಂ 12 (2) ಅಡಿಯಲ್ಲಿ ನೋಂದಾಯಿಸಲ್ಪಟ್ಟ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡೇತರ ಧರ್ಮಸಂಸ್ಥೆಗಳು ನಡೆಸುತ್ತಿರುವ ಹಾಸ್ಟೆಲ್‌ಗಳು, ಶಾಲಾ ಕಾಲೇಜುಗಳು, ಸ್ತ್ರೀ ಸ್ವೀಕಾರ ಕೇಂದ್ರಗಳು, ಅನಾಥಾಲಯಗಳು, ವಿಕಲಚೇತನರು ಮತ್ತು ಮಾನಸಿಕ ಅಸ್ವಸ್ಥ ನಿಲಯಗಳು, ವೃದ್ಧಾಶ್ರಮಗಳು, ಸಂಕೀರ್ಣಗಳಿಗೆ ಗುತ್ತಿಗೆ ಮಂಜೂರು ಮಾಡಲು ಅವಕಾಶ ಕಲ್ಪಿಸಿದೆ.

 

ಅದೇ ರೀತಿ ಕೇಂದ್ರ, ರಾಜ್ಯ ಸರ್ಕಾರದ ಸ್ವಾಮ್ಯ ಒಳಪಟ್ಟಿರುವ ನಿಯಮ, ಮಂಡಳಿಗಳ ಕಚೇರಿಗಳ, ಮತ್ತಿತರ ಸಾರ್ವಜನಿಕ ಮೂಲ ಸೌಕರ್ಯಗಳ ನಿರ್ಮಾಣ, ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಕಸ ಸಂಗ್ರಹಣೆ, ಪ್ರತ್ಯೇಕತೆ ಮತ್ತು ಮರು ಬಳಕೆ ಕೇಂದ್ರಗಳಿಗೆ, ಸಬ್‌ ಸ್ಟೇಷನ್‌ಗಳ, ಟ್ರಾನ್ಸ್‌ಫಾರ್ಮ್‌ಗಳ, ಯಾರ್ಡ್‌ಗಳು, ಮನರಂಜನಾ ಕೇಂದ್ರಗಳು, ಧಾರ್ಮಿಕ, ಸಾಂಸ್ಕೃತಿಕ ಚಟುವಟಿಕೆಗಳ ಕೇಂದ್ರಗಳ ನಿರ್ಮಾಣಕ್ಕೆ ಜಾಗವನ್ನು ಗುತ್ತಿಗೆ ಆಧಾರದ ಮೇಲೆ ಮಂಜೂರು ಮಾಡಲು ಅವಕಾಶವಿದೆ.

 

ಪ್ರಸ್ತಾವ ತಿರಸ್ಕೃತಗೊಳಿಸಿದ್ದೇಕೆ?

 

ನಿಯಮಗಳ ಪ್ರಕಾರ ಕಾಂಗ್ರೆಸ್‌ ಪಕ್ಷದ ಕಾರ್ಯಾಲಯ ಕಟ್ಟಡಕ್ಕೆ 30 ವರ್ಷಗಳ ಅವಧಿಗೆ ಗುತ್ತಿಗೆ ನೀಡಲು ಅವಕಾಶಗಳೇ ಇಲ್ಲ. ಹೀಗಾಗಿ ಈ ಪ್ರಸ್ತಾವನೆಯನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಹೀಗಾಗಿ ಈ ಪ್ರಸ್ತಾವನೆಯನ್ನು ತಿರಸ್ಕರಿಸಲಾಗಿದೆ ಎಂದು ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಉಮಾ ಮಹದೇವನ್‌ ಅವರು ತಿಳಿಸಿದ್ದಾರೆ. ಈ ಕುರಿತು ಸಚಿವ ಪ್ರಿಯಾಂಕ್‌ ಖರ್ಗೆ ಅವರೊಂದಿಗೂ ಚರ್ಚಿಸಿದ್ದಾರೆ ಎಂದು ಗೊತ್ತಾಗಿದೆ.

 

 

ಹಿಂದುಳಿದ ಮತ್ತು ನಾಯಕ  ಜನಾಂಗದವರ ಸ್ಮಶಾನಕ್ಕೆ ಮೀಸಲಿಟ್ಟಿರುವುದು ಮತ್ತು  ಒಕ್ಕಲಿಗರ ಸಮುದಾಯ ಭವನ, ಪೌರ ಕಾರ್ಮಿಕರು, ಸಫಾಯಿ ಕರ್ಮಚಾರಿಗಳಿಗೆ ನಿವೇಶನ, ಮೆಟ್ರಿಕ್‌ ನಂತರದ  ವಿದ್ಯಾರ್ಥಿ ನಿಲಯ ಸ್ಥಾಪನೆ ಸೇರಿದಂತೆ ಇನ್ನಿತರೆ ಸಾರ್ವಜನಿಕ ಉದ್ದೇಶಗಳಿಗಾಗಿ ಕಾಯ್ದಿರಿಸಿದ್ದ ಸರ್ಕಾರಿ ಜಮೀನನ್ನು ಕಾಂಗ್ರೆಸ್‌ ಭವನ ಟ್ರಸ್ಟ್‌ಗೆ ಮಂಜೂರು ಮಾಡಲು ಸಚಿವ ಸಂಪುಟವು ಈಚೆಗಷ್ಟೇ ಅನುಮೋದನೆ ನೀಡಿತ್ತು.

 

https://stack.thefile.in/2025/05/governance/32039/

 

ರಾಜ್ಯದ ನಗರಾಭಿವೃದ್ದಿ ಪ್ರಾಧಿಕಾರಗಳ ವ್ಯಾಪ್ತಿಯಲ್ಲಿನ ಬಡಾವಣೆಗಳಲ್ಲಿ ನಾಗರೀಕ ಸೌಲಭ್ಯಗಳ ಉದ್ದೇಶಗಳಿಗಾಗಿ ಮೀಸಲಿಟ್ಟ ನಿವೇಶನಗಳನ್ನು ಮಂಜೂರು ಮಾಡಿಸಿಕೊಳ್ಳುತ್ತಿರುವ ಕಾಂಗ್ರೆಸ್‌ ಭವನ ಟ್ರಸ್ಟ್‌, ಇದೀಗ ಕಂದಾಯ ಇಲಾಖೆ ವ್ಯಾಪ್ತಿಯಲ್ಲಿನ ಸರ್ಕಾರಿ ಜಮೀನುಗಳನ್ನೂ ಮಂಜೂರು ಮಾಡಿಸಿಕೊಳ್ಳಲು ಹೊರಟಿದೆ. ಅಲ್ಲದೇ  ಸರ್ಕಾರಿ ಜಮೀನು ಮಂಜೂರು ಮಾಡಿಸಿಕೊಳ್ಳಲು ಭೂ ಮಂಜೂರಾತಿ ನಿಯಮಗಳನ್ನೂ ಸಡಿಲಿಸಲು ಸಚಿವ ಸಂಪುಟವು ಒಪ್ಪಿಗೆ ನೀಡಿತ್ತು.

 

ಚಿಕ್ಕಬಳ್ಳಾಪುರ ತಾಲೂಕು ನಂದಿ ಹೋಬಳಿಯ ಅಗಲಕುರ್ಕಿ ಗ್ರಾಮದಲ್ಲಿ ಅನುಮೋದಿತ ಬಡಾವಣೆಯಲ್ಲಿ ನಿವೇಶನ ಕೋರಿದ್ದರು. ಆದರೀಗ ನಗರಾಭಿವೃದ್ದಿ ಇಲಾಖೆಯು  ಸ್ಥಳವನ್ನು ಬದಲಾಯಿಸಿತ್ತು.

 

https://stack.thefile.in/2025/05/governance/31847/

 

ಚಿಕ್ಕಬಳ್ಳಾಪುರ ಜಿಲ್ಲೆಗೆ  ಉಸ್ತುವಾರಿ ಸಚಿವ ಉನ್ನತ ಶಿಕ್ಷಣ ಸಚಿವ ಡಾ ಎಂ ಸಿ ಸುಧಾಕರ್‍‌ ಅವರ ಸೂಚನೆಯಂತೆ ನಗರಾಭಿವೃದ್ದಿ ಇಲಾಖೆಯು ಚಿಕ್ಕಬಳ್ಳಾಪುರ ಜಿಲ್ಲಾ ಕಾಂಗ್ರೆಸ್‌ ಭವನದ ಕಟ್ಟಡ ನಿರ್ಮಾಣಕ್ಕೆ ನಿವೇಶನವನ್ನು ಮಂಜೂರು ಮಾಡಲು ತಯಾರಿ ನಡೆಸಿತ್ತು. ಈ ಕುರಿತು 'ದಿ ಫೈಲ್‌', ಮೇ 5ರಂದೇ ದಾಖಲೆ ಸಹಿತ ವರದಿ ಪ್ರಕಟಿಸಿತ್ತು.

 

https://stack.thefile.in/2025/05/governance/31754/

 

ಹುಬ್ಬಳ್ಳಿ ಧಾರವಾಡ ಮಹಾನಗರಪಾಲಿಕೆ ವ್ಯಾಪ್ತಿ ಮತ್ತು ವಶದಲ್ಲಿರುವ ನಿವೇಶನವನ್ನು ಜಿಲ್ಲಾ ಕಾಂಗ್ರೆಸ್‌ ಭವನ ಕಟ್ಟಡ ನಿರ್ಮಾಣಕ್ಕೆ ಜಮೀನು ಮಂಜೂರು ಮಾಡಲು ಸಚಿವ ಸಂಪುಟವು ಅನುಮೋದಿಸಿತ್ತು.

 

https://stack.thefile.in/2025/02/governance/29927/

 

ಆದರೀಗ ಆರ್ಥಿಕ ಇಲಾಖೆಯು ಹುಬ್ಬಳ್ಳಿ ಧಾರವಾಡ ಮಹಾನಗರಪಾಲಿಕೆಯ ಆಸ್ತಿಯನ್ನು ಮಂಜೂರು ಮಾಡುವ ಪ್ರಸ್ತಾವನೆಯನ್ನು ಸಚಿವ ಸಂಪುಟದ ಮುಂದೆ ಮಂಡಿಸಲು ಒಪ್ಪಿಗೆ ಸೂಚಿಸಿತ್ತು. ಇದರ ಅಭಿಪ್ರಾಯದ ಮೇರೆಗೆ ಸಚಿವ ಸಂಪುಟವೂ 2025ರ ಫೆ.20ರಂದು ನಡೆದ ಸಭೆಯಲ್ಲಿ ಮಂಜೂರು ಮಾಡಿತ್ತು.

 

ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್‌ ಲಾಡ್, ಶಾಸಕ ವಿನಯ್ ಕುಲಕರ್ಣಿ, ಪ್ರಸಾದ್ ಅಬ್ಬಯ್ಯ ಮತ್ತಿತರರು ಈ ಪ್ರಸ್ತಾವನೆಗೆ ಶಿಫಾರಸ್ಸು ಮಾಡಿದ್ದರು.  ಇದನ್ನಾಧರಿಸಿ ಆರ್ಥಿಕ ಇಲಾಖೆಯ ಅಭಿಪ್ರಾಯ ಪಡೆಯಲು ಕಡತವನ್ನು ಪೌರಾಡಳಿತ ಇಲಾಖೆಯು ಕಡತವನ್ನು (DMA/DEV/OTH/285/2024)  ಮಂಡಿಸಿದ್ದರು.

 

https://stack.thefile.in/2025/01/governance/28907/

 

ಕೆಪಿಸಿಸಿಗೆ ಕಾರ್ಯಾಲಯ ಕಚೇರಿ ನಿರ್ಮಾಣ ಮಾಡಲು  ಉದ್ದೇಶಿತ ಆಸ್ತಿಯು ಮಹಾನಗರಪಾಲಿಕೆಯ ಆಸ್ತಿಯಾಗಿದೆ.  ಸರ್ಕಾರವು ನಿಗದಿಪಡಿಸಿರುವ ಮಾರ್ಗಸೂಚಿಗಳ ರೀತಿ ಪಾಲಿಕೆಯ ಆಸ್ತಿಗಳನ್ನು ಕೆಲವು ಉದ್ದೇಶಗಳನ್ನು ಹೊರತುಪಡಿಸಿ ಸಾರ್ವಜನಿಕ ಹರಾಜು ಮೂಲಕ ಮಾರಾಟ ಮಾಡಲು ಅವಕಾಶವಿದೆ. ಈ ಪ್ರಕರಣದಲ್ಲಿಯೂ ಸಾರ್ವಜನಿಕ ಹರಾಜು ಮುಖಾಂತರವೇ ಆಸ್ತಿಯನ್ನು ಹಂಚಿಕೆ ಮಾಡಬೇಕಾಗಿದೆ ಎಂದು ತಿಳಿಸಿತ್ತು.

 

ಆದರೆ ಈ ಪ್ರಸ್ತಾವಿತ ವಿಷಯಕ್ಕೆ ಪಾಲಿಕೆಯ ಕೌನ್ಸಿಲ್‌ ಸಭೆಯಲ್ಲಿ ಅನುಮೋದನೆ ಆಗಿಲ್ಲ. ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್‌ ಲಾಡ್ ಅವರು ಧಾರವಾಡ ಜಿಲ್ಲಾ ಕಾಂಗ್ರೆಸ್‌ ಕಾರ್ಯಾಲಯ ನಿರ್ಮಾಣ ಮಾಡುವ ಸಲುವಾಗಿ ಜಾಗವನ್ನು ಮಂಜೂರು ಮಾಡಲು ಪ್ರಸ್ತಾವನೆ ಸಲ್ಲಿಸಿದ್ದಾರೆ. ಇದಕ್ಕೆ ತಗುಲುವ ವೆಚ್ಚವನ್ನು ಈಗಿನ ಸರ್ಕಾರದ ದರ ಅಥವಾ ಅದಕ್ಕಿಂತ ಕಡಿಮೆ ಬೆಲೆಯನ್ನು ಭರಿಸಲು ಸಿದ್ಧರಿದ್ದೇವೆ ಎಂದು ತಿಳಿಸಿದ್ದರು.

 

ಭಾರತೀಯ ಜನತಾ ಪಾರ್ಟಿಯು ತಾಲೂಕು ಪ್ರದೇಶಗಳಲ್ಲಿ ಸ್ವಂತ ಕಚೇರಿಗಾಗಿ ಕಟ್ಟಡ ನಿರ್ಮಾಣ ಮಾಡಲು ಪರಿಶಿಷ್ಟ ಜಾತಿಯ ಸರ್ಕಾರಿ ವಿದ್ಯಾರ್ಥಿ ನಿಲಯಗಳೂ ಸೇರಿದಂತೆ ಸಾರ್ವಜನಿಕ ಉದ್ದೇಶಕ್ಕೆ ಕಾಯ್ದಿರಿಸಿರುವ ನಿವೇಶನ, ಜಮೀನುಗಳ ಮೇಲೆ ಕಣ್ಣು ಹಾಕಿತ್ತು.

 

https://stack.thefile.in/2022/07/governance/12592/

 

ಪರಿಶಿಷ್ಟ ಜಾತಿಯ ಸರ್ಕಾರಿ ವಿದ್ಯಾರ್ಥಿ ನಿಲಯಗಳ ಕಟ್ಟಡ ನಿರ್ಮಾಣ ಸಂಬಂಧ ಕಾಯ್ದರಿಸಲಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಆಯುಕ್ತರು ವರದಿ ನೀಡಿದ್ದರೂ ಇದೇ ಜಾಗದಲ್ಲಿ ಭಾರತೀಯ ಜನತಾ ಪಕ್ಷದ ಕಚೇರಿ ಕಟ್ಟಡ ನಿರ್ಮಾಣ ಮಾಡಲು ಖಾಲಿ ನಿವೇಶನ ಮಂಜೂರು ಮಾಡಲು ವರದಿ ಸಲ್ಲಿಸಬೇಕು ಎಂದು ನಿರ್ದೇಶಿಸಿದ್ದನ್ನು ಸ್ಮರಿಸಬಹುದು.

 

ಈ ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿಯೂ ರಾಷ್ಟ್ರೋತ್ಥಾನ ಪರಿಷತ್‌, ಜನಸೇವಾ ಟ್ರಸ್ಟ್‌ ಸೇರಿದಂತೆ ಸಂಘ ಪರಿವಾರದ ಇನ್ನಿತರೆ ಸಂಘ ಸಂಸ್ಥೆಗಳಿಗೂ ಗೋಮಾಳ, ಸರ್ಕಾರಿ ಜಮೀನು, ಬಿ ಖರಾಬು ಜಮೀನುಗಳನ್ನು ಚಿಲ್ಲರೆ ದರದಲ್ಲಿ ಮಂಜೂರು ಮಾಡಿತ್ತು.

 

https://stack.thefile.in/2022/08/governance/12839/

 

ಇದೀಗ ಕಾಂಗ್ರೆಸ್‌ ಸರ್ಕಾರವು ಸಹ ಜಿಲ್ಲಾ ಕೇಂದ್ರಗಳಲ್ಲಿ ಕಾಂಗ್ರೆಸ್‌ ಭವನಗಳಿಗೆ ಕಟ್ಟಡ ನಿರ್ಮಾಣಕ್ಕೆ ನಗರಾಭಿವೃದ್ಧಿ ಪ್ರಾಧಿಕಾರಗಳ ಅಧೀನದಲ್ಲಿ ಮತ್ತು ನಾಗರಿಕ ಸೌಲಭ್ಯಗಳಿಗೆಂದು ಮೀಸಲಿರಿಸಿರುವ ನಿವೇಶನಗಳ ಮೇಲೆ ಕಣ್ಣು ಹಾಕಿರುವುದು ಸಾರ್ವಜನಿಕ ವಲಯದಲ್ಲಿ ಟೀಕೆಗೆ ಗುರಿಯಾಗಿದೆ.

Tags: AICCAllAllamassemblyAuctionbengaluruBharathBhavanabjpChiefcongressD K ShivakumarDeputyGandhiGomalaGuidenceh d kumarswamyIndiaKishoreKPCCLitigationMahanagaraministerMLAMoilyMulagundaNavalOfficesPalikePublicr ashokRandeepRuralsessionSharmaSiddaramaiahaSinghSuresh GowdaSurjewalaTrustTumakuruVeerabhadrappaVeerappaVijayaಅಧಿವೇಶನಆರ್‌ ಅಶೋಕ್‌ಕಂದಾಯಕಾಂಗ್ರೆಸ್‌ಕಾಂಗ್ರೆಸ್‌ ಸರ್ಕಾರಗಾಂಧಿಗೋಮಾಳಚಿಕ್ಕನಾಯಕನಹಳ್ಳಿಜಮೀನುಟ್ರಸ್ಟ್‌ತುಮಕೂರುಪಾಟೀಲಬಸನಗೌಡಬಸನಗೌಢಬಿಜೆಪಿಭವನಭಾರತಮಹಾನಗರಪಾಲಿಕೆಮೊಯಿಲಿಯತ್ನಾಳರಣದೀಪ್‌ವಿಧಾನಸಭೆವೀರಪ್ಪವ್ಯಾಜ್ಯಸಾರ್ವಜನಿಕಸಿಂಗ್ಸಿದ್ದರಾಮಯ್ಯಸುಪರ್ದಿಸುರೇಶ್ ಗೌಡಸುರೇಶ್‌ ಬಾಬುಸುರ್ಜೇವಾಲಾಸ್ಮಶಾನಹರಾಜುಹೆಚ್‌ ಡಿ ಕುಮಾರಸ್ವಾಮಿಹೈಕೋರ್ಟ್‌
Advertisement Banner
Previous Post

70 ಹುದ್ದೆಗಳಿಗೆ ನೇಮಕ; ಆದೇಶ ನೇರಾನೇರ ಉಲ್ಲಂಘನೆ, ರಾಜ್ಯಪಾಲರ ಕಚೇರಿಯ ಜಾಣ ಕುರುಡು ಬಯಲು

thefilestack

thefilestack

Recommended

ಡಿಸಿಆರ್‍‌ಇ ಸೆಲ್‌ ಅಂಗಳಕ್ಕೆ ವಿಜಯೇಂದ್ರ ಬೆದರಿಕೆ ಆರೋಪದ ಚೆಂಡು; ಅಗತ್ಯ ಕ್ರಮಕ್ಕೆ ಸರ್ಕಾರ ಸೂಚನೆ

1 year ago

ವಿದ್ಯಾರ್ಥಿ ವೇತನಕ್ಕೆ ಅನುದಾನ ಕೊರತೆ; 48,019 ಅರ್ಜಿಗಳಿಗೆ ಇನ್ನೂ ದೊರೆಯದ ಅನುಮೋದನೆ

9 months ago

Don't Miss

ಕಾಂಗ್ರೆಸ್‌ ಸರ್ಕಾರದಿಂದ ‘ಕಾಂಗ್ರೆಸ್‌ ಭವನ ಟ್ರಸ್ಟ್‌’ಗೆ ಸರ್ಕಾರಿ ಜಾಗ; ಹಿತಾಸಕ್ತಿ ಸಂಘ‍ರ್ಷದ ಸುಳಿಯಲ್ಲಿ ಸಿಎಂ, ಡಿಸಿಎಂ

August 18, 2025

70 ಹುದ್ದೆಗಳಿಗೆ ನೇಮಕ; ಆದೇಶ ನೇರಾನೇರ ಉಲ್ಲಂಘನೆ, ರಾಜ್ಯಪಾಲರ ಕಚೇರಿಯ ಜಾಣ ಕುರುಡು ಬಯಲು

August 18, 2025

ಗೃಹಲಕ್ಷ್ಮಿ ವೆಚ್ಚಕ್ಕೂ ಜಿಎಸ್‌ಟಿ ಕೊಡುಗೆಗೂ ಅಜಗಜಾಂತರ; ಹಣಕಾಸು ಹೊಣೆಗಾರಿಕೆ ಸೃಷ್ಟಿಸಿತೇ?

August 16, 2025

ಕಲ್ಯಾಣ ಕರ್ನಾಟಕದಲ್ಲಿ ಪಿಡಬ್ಲ್ಯೂಡಿ ಇಲಾಖೆಯ ಆರು ಅಧಿಕಾರಿಗಳ ಮೇಲೆ ಲೋಕಾಯುಕ್ತ ದಾಳಿ; ಮೂವರು ಮಾತ್ರ ಅಮಾನತು

August 14, 2025
the file

THE FILE is run by the File Stack Media Private Limited. It is founded and edited by G Mahantesh, a veteran investigative journalist who has worked in the past for mainstream news television, broadsheet newspapers and digital ventures.

Follow us

Recent News

ಕಾಂಗ್ರೆಸ್‌ ಸರ್ಕಾರದಿಂದ ‘ಕಾಂಗ್ರೆಸ್‌ ಭವನ ಟ್ರಸ್ಟ್‌’ಗೆ ಸರ್ಕಾರಿ ಜಾಗ; ಹಿತಾಸಕ್ತಿ ಸಂಘ‍ರ್ಷದ ಸುಳಿಯಲ್ಲಿ ಸಿಎಂ, ಡಿಸಿಎಂ

August 18, 2025

70 ಹುದ್ದೆಗಳಿಗೆ ನೇಮಕ; ಆದೇಶ ನೇರಾನೇರ ಉಲ್ಲಂಘನೆ, ರಾಜ್ಯಪಾಲರ ಕಚೇರಿಯ ಜಾಣ ಕುರುಡು ಬಯಲು

August 18, 2025

Categories

  • Blog
Support Us
  • About
  • Advertise
  • Privacy & Policy
  • Contact

© THE FILE 2026 All Rights Reserved by File Stack Media Private Limited. Designed by Kalahamsa infotech Pvt.Ltd

No Result
View All Result
  • Home
  • CBI/CID
  • RTI
  • GOVERNANCE
  • IT/ED
  • LEGISLATURE
  • LOKAYUKTA
  • About Us
  • Contact Us
  • Kannada Version

© THE FILE 2026 All Rights Reserved by File Stack Media Private Limited. Designed by Kalahamsa infotech Pvt.Ltd