the file
No Result
View All Result
Subscribe to get Updates
  • Home
  • CBI/CID
  • RTI
  • GOVERNANCE
  • IT/ED
  • LEGISLATURE
  • LOKAYUKTA
  • About Us
  • Contact Us
  • Kannada Version
  • Home
  • CBI/CID
  • RTI
  • GOVERNANCE
  • IT/ED
  • LEGISLATURE
  • LOKAYUKTA
  • About Us
  • Contact Us
  • Kannada Version
The File
No Result
View All Result
Home GOVERNANCE

ಕೋವಿಡ್‌ ಭ್ರಷ್ಟಾಚಾರ; ‘ದಿ ಫೈಲ್‌’ ವರದಿ ಎತ್ತಿ ಹಿಡಿದ ಲೆಕ್ಕಪತ್ರ ಸಮಿತಿ, ಸಮಗ್ರ ತನಿಖೆಗೆ ಶಿಫಾರಸ್ಸು

thefilestack by thefilestack
July 17, 2023
in GOVERNANCE
0
0
SHARES
0
VIEWS
Share on FacebookShare on Twitter

ಬೆಂಗಳೂರು; ಕೋವಿಡ್‌-19 ನಿರ್ವಹಣೆಗಾಗಿ ಕರ್ನಾಟಕ ಡ್ರಗ್‌ ಲಾಜಿಸ್ಟಿಕ್‌ ಮತ್ತು ವೇರ್‌ಹೌಸಿಂಗ್‌ ಸೊಸೈಟಿ ಮೂಲಕ ಖರೀದಿಸಿದ್ದ ಪಿಪಿಇ ಕಿಟ್‌, ಸ್ಯಾನಿಟೈಸರ್‍‌, ವೆಂಟಿಲೇಟರ್‍‌, ಆಂಪೋಟರಿಸಿಯನ್‌, ಕೋವಿಡ್‌ ಲಸಿಕೆ, ಸೇರಿದಂತೆ ಇನ್ನಿತರೆ  ಔ‍ಷಧ ಸಾಮಗ್ರಿ ಮತ್ತು ವೈದ್ಯಕೀಯ ಸಲಕರಣೆ, ಉಪಕರಣಗಳ ಖರೀದಿಯಲ್ಲಿ ಭಾರೀ ಪ್ರಮಾಣದಲ್ಲಿ ಅವ್ಯವಹಾರ ನಡೆದಿರುವುದು ಆತ್ಮಘಾತುಕ ಮತ್ತು ಜನವಿರೋಧಿಯಾಗಿದೆ ಎಂದು ಅಭಿಪ್ರಾಯಿಸಿರುವ  ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿಯು ವಿಧಾನಸಭೆಗೆ ತನ್ನ ವರದಿಯನ್ನು ಸಲ್ಲಿಸಿದೆ.

 

ಕೋವಿಡ್‌ ಹೆಸರಿನಲ್ಲಿ ಖರೀದಿಸಲಾದ ವೈದ್ಯಕೀಯ ಸಲಕರಣೆಗಳ ದರದಲ್ಲಿ ವ್ಯತ್ಯಾಸಗಳೂ ಸೇರಿದಂತೆ ಇನ್ನಿತರೆ ಅಕ್ರಮ, ಅವ್ಯವಹಾರ, ಬೊಕ್ಕಸಕ್ಕೆ ನಷ್ಟ ಸೇರಿದಂತೆ ಭ್ರಷ್ಟಾಚಾರದ ವಿವಿಧ ಮುಖಗಳನ್ನು ‘ದಿ ಫೈಲ್‌’ ಸರಣಿ ರೂಪದಲ್ಲಿ ಹೊರಗೆಡವಿದ್ದ ವರದಿಗಳನ್ನಾಧರಿಸಿ ಕರ್ನಾಟಕ ರಾಷ್ಟ್ರಸಮಿತಿಯು ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿಗೆ ದೂರು ಸಲ್ಲಿಸಿತ್ತು. ಇದೀಗ ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿಯು ಸಲ್ಲಿಸಿರುವ ವರದಿಯಲ್ಲಿ  ‘ದಿ ಫೈಲ್‌’ ಹೊರಗೆಡವಿದ್ದ ವರದಿಗಳನ್ನು ಎತ್ತಿ ಹಿಡಿದಿವೆ.

 

‘ಕರೋನಾ ನಿಯಂತ್ರಿಸುವಲ್ಲಿ ಸರ್ಕಾರವು ವಿಫಲವಾಗಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ನಡೆಸಿದ ಉಪಕರಣಗಳು, ಔಷಧ ಸಾಮಗ್ರಿಗಳ ಖರೀದಿ, ಸದ್ಬಳಕೆ, ಕರೋನಾ ರೋಗಿಗಳಿಗೆ ಆಸ್ಪತ್ರೆಗಳಲ್ಲಿ ಹಾಸಿಗೆಗಳ ಹಂಚಿಕೆ, ಖಾಸಗಿ ಆಸ್ಪತ್ರೆಗಳಿಗೆ ಪಾವತಿಸಿದ್ದ ಮೊತ್ತ ಮತ್ತು ಕರೋನಾ ನಿಯಂತ್ರಣ ಸಂಬಂಧ ವಿವಿಧ ಇಲಾಖೆಗಳಿಂದ ಭರಿಸಲಾಗಿದ್ದ ವೆಚ್ಚ ಕುರಿತಂತೆ ಸಮಗ್ರ ಮಾಹಿತಿ ಹಾಗೂ ಪೂರಕ ದಾಖಲೆಗಳನ್ನು ಸಮಿತಿಯ ಪರಿಶೀಲನೆಗಾಗಿ ಸಲ್ಲಿಸಬೇಕು ಎಂದು ಸೂಚಿಸಿ ಸಾಕಷ್ಟು ಕಾಲಾವಕಾಶ ನೀಡಿದ ನಂತರವೂ ಇಲಾಖೆಯು ಸಲ್ಲಿಸದಿರುವ ಕಾರಣ ಪ್ರತಿಷ್ಠಿತ ಸ್ವಾಯತ್ತ ತನಿಖಾ ಸಂಸ್ಥೆಯ ಮುಖಾಂತರ ಹಗರಣದ ಕುರಿತಾದ ಸಮಗ್ರ ತನಿಖೆಯನ್ನು ನಿಷ್ಪಕ್ಷಪಾತವಾಗಿ ನಡೆಸಬೇಕು,’ ಎಂದು ಸಾರ್ವಜನಿಕ ಲೆಕ್ಕ ಪತ್ರ ಸಮಿತಿಯು ಸರ್ಕಾರವನ್ನು ಆಗ್ರಹಿಸಿದೆ.

 

‘ವಿಶ್ವ ಆರೋಗ್ಯ ಸಂಸ್ಥೆಯು ಜಗತ್ತಿನ ಸಮಗ್ರ ನಾಗರಿಕರ ಹಿತವನ್ನು ಗಮನದಲ್ಲಿರಿಸಿಕೊಂಡು ನೀಡಿದಂತಹ ಮುನ್ನೆಚ್ಚರಿಕೆಯನ್ನು ಕೇವಲ ಒಂದೇ ತಿಂಗಳದಲ್ಲಿ ಧಿಕ್ಕರಿಸಿ ಐವರ್‍‌ಮೆಕ್ಟಿನ್‌ ಔಷಧವನ್ನು ಖರೀದಿಸಿರುವ ಕೃತ್ಯವು ಆತ್ಮಾಘಾತುಕ, ಜನವಿರೋಧಿ, ದುರುದ್ದೇಶದಿಂದ ಕೂಡಿದೆ,’ ಎಂದು ಸಮಿತಿಯು ವರದಿಯಲ್ಲಿ ಆಕ್ರೋಶವನ್ನು ವ್ಯಕ್ತಪಡಿಸಿದೆ.

 

ವಿಶೇಷವೆಂದರೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಸ್ಪೀಕರ್‍‌ ಆಗಿದ್ದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಸಾರ್ವಜನಿಕ ಲೆಕ್ಕಪತ್ರ ಸಮಿತಿಯು ಸಿದ್ಧಪಡಿಸಿದ್ದ ವರದಿಯನ್ನು ವಿಧಾನಸಭೆಯಲ್ಲಿ ಮಂಡನೆಗೆ ಅವಕಾಶ ನೀಡಿರಲಿಲ್ಲ. ಅಲ್ಲದೆ ಕೋವಿಡ್‌ ಸಲಕರಣೆಗಳ ಖರೀದಿಯಲ್ಲಿ ಯಾವುದೇ ಭ್ರಷ್ಟಾಚಾರಗಳು ನಡೆದಿಲ್ಲ ಎಂದು ಆರೋಗ್ಯ ಸಚಿವರಾಗಿದ್ದ ಡಾ ಕೆ ಸುಧಾಕರ್‍‌, ಸಚಿವ ಡಾ ಸಿ ಎನ್‌ ಅಶ್ವಥ್‌ನಾರಾಯಣ್‌ ಅವರು ಸಮರ್ಥಿಸಿಕೊಂಡಿದ್ದರು.  ಇದೀಗ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಸ್ಪೀಕರ್‍‌ ಯು ಟಿ ಖಾದರ್‍‌ ಅವರು ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ವರದಿಯನ್ನು ಮಂಡಿಸಲು ಅನುಮೋದನೆ ನೀಡಿದ್ದಾರೆ.

 

2021ರ ಫೆಬ್ರುವರಿಯಲ್ಲಿ ಹೆಮಾಟಲಜಿ ಸೆಲ್‌ ಕೌಂಟ್ಸ್‌ಗಳಿಗೆ ಸಂಬಂಧಿಸಿದಂತೆ  ಪ್ರತಿ ಯುನಿಟ್‌ಗೆ 2,96,180 ದರದಲ್ಲಿ 1,195 ಯೂನಿಟ್‌ಗಳನ್ನು ಟೆಂಡರ್‍‌ ಮೂಲಕ ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಖರೀದಿಸಿತ್ತು. ಆದರೆ ಅದೇ ಅವಧಿಯಲ್ಲಿ ಊ ಉಪಕರಣಗಳನ್ನು ಹಿಮಾಚಲ ಪ್ರದೇಶ ರಾಜ್ಯವು ಪ್ರತಿಯೂನಿಟ್‌ಗೆ 1,30,000 ರು. ವೆಚ್ಚದಲ್ಲಿ ಖರೀದಿಸಿತ್ತು. ಈ ವ್ಯತ್ಯಾಸವು 19,85,85,100 ರು.ಗಳಷ್ಟು ಅಧಿಕ ವೆಚ್ಚದಲ್ಲಿ ಪರಿಣಿಮಿಸಿತ್ತು. ಇಲಾಖೆಯು ವಾಸ್ತವಿಕ ಸತ್ಯವನ್ನು ಮರೆಮಾಚಿ ತಪ್ಪು ಉತ್ತರವನ್ನು ಸಲ್ಲಿಸಿದೆ  ಎಂದು ಅಭಿಪ್ರಾಯಿಸಿರುವ ಸಮಿತಿಯು ತಪ್ಪು ಮಾಹಿತಿ ಮತ್ತು ಉದ್ದೇಶಪೂರ್ವಕವಾಗಿ ಅಪೂರ್ಣ ದಾಖಲೆಗಳನ್ನು ಸಲ್ಲಿಸಿದ ಹಾಗೂ ರಾಜ್ಯದ ಬೊಕ್ಕಸಕ್ಕೆ ನಷ್ಟವುಂಟಾಗಲು ಕಾರಣಕರ್ತರಾದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು ಎಂದು ಶಿಫಾರಸ್ಸು ಮಾಡಿದೆ.

 

ರ್‍ಯಾಪಿಡ್‌ ಆಂಟಿಜನ್‌ ಟೆಸ್ಟ್‌ ಕಿಟ್‌ಗಳ ಖರೀದಿಗೆ ಸಂಬಂಧಿಸಿದಂತೆ ಇಲಾಖೆಯು ಕಿಟ್‌ಗಳನ್ನು ಖರೀದಿಸುವ ಮುನ್ನ ಅಗತ್ಯತೆ ನಿರ್ಧರಣೆ ಮಾಡಿರುವ ಬಗ್ಗೆ ಯಾವುದೇ ಮಾಹಿತಿಗಳನ್ನೂ ಸಮಿತಿಗೆ ಒದಗಿಸಿರಲಿಲ್ಲ. ಇಲಾಖೆಯು ಕೆಲವೇ ದಿನಗಳ ಅಂತರದಲ್ಲಿ ಕೋಟ್ಯಂತರ ಕಿಟ್‌ಗಳನ್ನು ಖರೀದಿಸಲು ಪ್ರತ್ಯೇಕ ಟೆಂಡರ್‍‌, ದರಪಟ್ಟಿ ಆಹ್ವಾನಿಸಿರುವುದು ಕೆಟಿಪಿಪಿ ಕಾಯ್ದೆ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಸಮಿತಿಯು ತನ್ನ ವರದಿಯಲ್ಲಿ   ಸಾಬೀತುಪಡಿಸಿದೆ.

 

ಒಪ್ಪಿದಂತಹ ಪ್ರಮಾಣಕ್ಕೆ ಸುದರ್ಶನ್‌ ಫಾರ್ಮಾ ಇಂಡಸ್ಟ್ರೀಸ್‌ ಸಂಸ್ಥೆಯು ಕಿಟ್‌ಗಳನ್ನು  ಸರಬರಾಜು ಮಾಡದೇ ಇದ್ದರೂ ಇಲಾಖೆಯು ಕೇವಲ ತೋರಿಕೆಗಾಗಿ ಸರಬರಾಜುದಾರರಿಗೆ ನೋಟೀಸ್‌ಗಳನ್ನು ಜಾರಿ ಮಾಡಿತ್ತು. ಸಂಸ್ಥೆಯ ವಿರುದ್ಧ ಯಾವುದೇ ಕಾನೂನಾತ್ಮಕ ಕ್ರಮ ಕೈಗೊಳ್ಳದೇ, ಕಪ್ಪು ಪಟ್ಟಿಗೂ ಸೇರಿಸದೇ ಆ ಸರಬರಾಜುದಾರರನ್ನು ಮುಂದಿನ ಟೆಂಡರ್‍‌, ದರಪಟ್ಟಿಗಳಲ್ಲಿ ಭಾಗವಹಿಸಲು ಅವಕಾಶ ನೀಡಿತ್ತು. ಸರಬರಾಜು ಆದೇಶ ನೀಡಿರುವುದು ಇಲಾಖೆ ಮತ್ತು ಸರಬರಾಜುದಾರರ ನಡುವಿನ ಕಾನೂನುಬಾಹಿರ ಹೊಂದಾಣಿಕೆ ತೋರಿಸುತ್ತದೆ ಎಂದು ಸಮಿತಿಯು ಆತಂಕ ವ್ಯಕ್ತಪಡಿಸಿದೆ.

 

30 ಲಕ್ಷ ಕಿಟ್‌ಗಳ ಪೂರೈಕೆಗೆ ಕರೆದಿದ್ದ ದರಪಟ್ಟಿಗೆ ಬೋಗಿಲಾಲ್‌ ಸಂಸ್ಥೆಯು ನಮೂದಿಸಿದ್ದ 81.64 ರು. ದರವು ಕನಿಷ್ಟವಾಗಿತ್ತು. ಆದರೆ ಸಂಸ್ಥೆಯು ನೀಡಿದ್ದ ಕಿಟ್‌ಗಳ ಮಾದರಿಯನ್ನು ಬಿಎಂಸಿಆರ್‍‌ಐ ಪ್ರಯೋಗಾಲಯಕ್ಕೆ ಸಲ್ಲಿಸಿದಾಗ ತೃಪ್ತಿದಾಯಕವಾಗಿಲ್ಲದ ವರದಿಯು ಸ್ವೀಕೃತವಾಗಿತ್ತು. ಈ ಕುರಿತು ಪರಿಶೀಲಿಸಿದ್ದ ಸಾರ್ವಜನಿಕ ಲೆಕ್ಕಪತ್ರ ಸಮಿತಿಯು ‘ ಸಂಸ್ಥೆಯ ವಿರುದ್ಧ ಯಾವುದೇ ಕಾನೂನಾತ್ಮಕ ಕ್ರಮ ಕೈಗೊಳ್ಳದೇ ಕಪ್ಪು ಪಟ್ಟಿಗೂ ಸೇರಿಸದೇ ಇರುವುದು ಇಲಾಖಾಧಿಕಾರಿಗಳು ಎಸಗಿರುವ ಲೋಪ ಎಂದು ಅಭಿಪ್ರಾಯಿಸಿದೆ. ಅಲ್ಲದೇ ಈ ಎಲ್ಲಾ ನ್ಯೂನತೆಗಳಿಗೆ ಕಾರಣಕರ್ತರಾದ ಅಧಿಕಾರಿಗಳ ವಿರುದ್ಧ ಹಾಘೂ ಸಂಬಂಧಪಟ್ಟ ಸರಬರಾಜುದಾರರ ವಿರುದ್ಧ ತುರ್ತಾಗಿ ಶಿಸ್ತು ಕ್ರಮಕೈಗೊಳ್ಳಬೇಕು ಹಾಗೂ ಸಮಿತಿಯು ಕೋರಿದ್ದ ಸಾಕ್ಷ್ಯಗಳನ್ನು ಒದಗಿಸದಿರುವುದಕ್ಕೆ ತೀವ್ರ ಅಸಮಾಧಾನವನ್ನೂ ವ್ಯಕ್ತಪಡಿಸಿದೆಯಲ್ದೆ ಇಲಾಖಾಧಿಕಾರಿಗಳ ವಿರುದ್ಧ ಸದನದಲ್ಲಿ ಹಕ್ಕು ಚ್ಯುತಿ ಮಂಡಿಸಬೇಕು ಎಂದು ಸಮಿತಿಯು ನಿರ್ಣಯಿಸಿರುವುದು ವರದಿಯಿಂದ ಗೊತ್ತಾಗಿದೆ.

 

ಐವರ್‍‌ ಮೆಕ್ಟಿನ್‌ ಔಷಧ ಖರೀದಿಸಿದ ಪ್ರಮಾಣ ಮತ್ತು ಕೋವಿಡ್‌ ಸೋಂಕಿತರ ನಿರ್ವಹಣೆಗಾಗಿ ಕೇಂದ್ರ ಸರ್ಕಾರವು ಪರಿಷ್ಕೃತ ಮಾರ್ಗಸೂಚಿಗಳನ್ನು ನೀಡ ಔಷಧಿ ಬಳಕಗೆ ನಿರ್ಬಂಧ ಏರಿದ್ದರೂ ದಾಸ್ತಾನಿನಲ್ಲಿ ಈ ಔಷಧಗಳು ಉಳಿದಿದ್ದವು. ಇದನ್ನು ಪರಿಶೀಲಿಸಿರುವ ಸಮಿತಿಯು ‘ ಸಮಗ್ರ ನಾಗರಿಕರ ಹಿತವನ್ನು ಗಮನದಲ್ಲಿರಿಸಿಕೊಂಡು ನೀಡಿದಂತಹ ಮುನ್ನೆಚ್ಚರಿಕೆಯನ್ನು ಕೇವಲ ಒಂದೇ ತಿಂಗಳ ಅಂತರದಲ್ಲಿ ಧಿಕ್ಕರಿಸಿ ಈ ಔಷಧಿಯನ್ನು ಖರೀದಿಸಿರುವ ಕೃತ್ಯವು ಆತ್ಮಾಘಾತುಕ, ಜನವಿರೋಧಿ ಮತ್ತು ದುರುದ್ದೇಶದಿಂದ ಕೂಡಿದೆ,’ ಎಂದು ಸಮಿತಿಯು ಆಕ್ರೋಶ ವ್ಯಕ್ತಪಡಿಸಿದೆ.

 

ಕಪ್ಪು ಶಿಲೀಂಧ್ರ ರೋಗದ ಚಿಕಿತ್ಸೆ ಬಗ್ಗೆ ಇಲಾಖೆಯು ಮಾಡಿದ ಖರ್ಚು ಮತ್ತು ಇನ್ನಿತರೆ ವಿವರಗಳನ್ನು ಪರಿಶೀಲಿಸಿರುವ ಸಮಿತಿಯು ರಾಜ್ಯ ಬೊಕ್ಕಸಕ್ಕೆ ನಷ್ಟವಾಗಿದೆ ಎಂದು ಎತ್ತಿ ಹಿಡಿದಿದೆ. ‘ಕಪ್ಪು ಶಿಲೀಂಧ್ರ ರೋಗ ಚಿಕಿತ್ಸೆಗೆ ಬಳಸುವ ವಯಲ್ಸ್‌ಗಳನ್ನು ಹೆಚ್ಚು ಮೊತ್ತ ನೀಡಿ ಖರೀದಿಸಿದ್ದಂತಹ 1.14 ಕೋಟಿ ಅಧಿಕ ವೆಚ್ಚವಾಗುವಲ್ಲಿ ಪರಿಣಿಮಿಸಿತ್ತು. ಆ ಲೋಪಕ್ಕೆ ಕಾರಣಕರ್ತರಾದ ಅಧಿಕಾಋಇಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಸಮಿತಿಯು ಶಿಫಾರಸ್ಸು ಮಾಡಿದೆ.

 

ಕೋವಿಡ್‌ ಭ್ರಷ್ಟಾಚಾರಗಳನ್ನು   ಬೆನ್ನೆತ್ತಿದ್ದ ‘ದಿ ಫೈಲ್‌’ ತನಿಖಾ ತಂಡ ಈವರೆವಿಗೆ ಕೋವಿಡ್‌ ಭ್ರಷ್ಟಾಚಾರದ 50 ಮುಖಗಳನ್ನು ಅನಾವರಣಗೊಳಿಸಿತ್ತು.

 

 

ಸರಣಿ ರೂಪದಲ್ಲಿ ದಾಖಲೆಗಳನ್ನಾಧರಿಸಿ ಏಪ್ರಿಲ್‌ 21ರಿಂದ ಆಗಸ್ಟ್‌ 25ರವರೆಗೆ ಒಟ್ಟು 50 ತನಿಖಾ ವರದಿಗಳನ್ನು ಪ್ರಕಟಿಸಿದೆ. ‘ದಿ ಫೈಲ್‌’ ಪ್ರಕಟಿಸಿದ ಹಲವು ವರದಿಗಳನ್ನಾಧರಿಸಿಯೇ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಸರ್ಕಾರದ ವಿರುದ್ಧ ಗುಡುಗಿದ್ದರು. ಅಲ್ಲದೆ ‘ದಿ ಫೈಲ್‌’ ವರದಿಯಲ್ಲಿದ್ದ ದಾಖಲೆಗಳನ್ನೇ ಬಿಡುಗಡೆ ಮಾಡಿದ್ದರಲ್ಲದೆ ಇಡೀ ಖರೀದಿ ಪ್ರಕ್ರಿಯೆಗಳನ್ನು ಹೈಕೋರ್ಟ್‌ ಹಾಲಿ ನ್ಯಾಯಾಧೀಶರಿಂದ ನ್ಯಾಯಾಂಗ ತನಿಖೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದ್ದರು.

 

 

ಈ ಬೆಳವಣಿಗೆ ನಡುವೆಯೇ ಆಡಳಿತ ಪಕ್ಷವೂ ಅಕ್ರಮಗಳು ನಡೆದಿದೆ ಎಂಬ ಆರೋಪವನ್ನು ತಳ್ಳಿ ಹಾಕಿತ್ತಲ್ಲದೇ ಮತ್ತಿತರೆ ದಾಖಲೆಗಳನ್ನು ಬಿಡುಗಡೆ ಮಾಡಿತ್ತು. ಆದರೆ ಈ ದಾಖಲೆಗಳ ನೈಜತೆ ಕುರಿತು ಅನುಮಾನಗಳನ್ನು ಬೆನ್ನೆತ್ತಿದ್ದ ‘ದಿ ಫೈಲ್‌’ ತನಿಖಾ ತಂಡ ಮತ್ತಷ್ಟು ದಾಖಲೆಗಳನ್ನಾಧರಿಸಿ ವರದಿ ಪ್ರಕಟಿಸಿತ್ತು.

 

 

ಸಾರ್ವಜನಿಕ ಲೆಕ್ಕಪತ್ರ ಸಮಿತಿ ಮತ್ತು ಅಂದಾಜು ಸಮಿತಿಯೂ ತನಿಖೆಗೆ ಕೈಗೆತ್ತಿಕೊಂಡಿದೆ. ನಮ್ಮ ವರದಿಗಳನ್ನು ಉಲ್ಲೇಖಿಸಿ ಕರ್ನಾಟಕ ರಾಷ್ಟ್ರಸಮಿತಿಯೂ ಭ್ರಷ್ಟಾಚಾರ ನಿಗ್ರಹ ದಳದಲ್ಲಿ ದೂರನ್ನೂ ದಾಖಲಿಸಿತ್ತು.  ದೂರನ್ನು ಸ್ವೀಕರಿಸಿದೆಯಲ್ಲದೆ ಭ್ರಷ್ಟಾಚಾರ ನಿಗ್ರಹ ತಡೆ ಕಾಯ್ದೆಯಡಿಯಲ್ಲಿ ತನಿಖೆ ಕೈಗೊಂಡಿರುವ ಎಸಿಬಿ, ಅಧಿಕಾರಿಗಳ ವಿಚಾರಣೆಗೆ ಪೂರ್ವಾನುಮತಿ ಕೋರಿ ಸರ್ಕಾರಕ್ಕೆ ಪತ್ರವನ್ನೂ ಬರೆದಿತ್ತು.

 

 

ಅದೇ ರೀತಿ ಬಿಜೆಪಿ ಮಾಜಿ ಶಾಸಕ ಡಾ ಸಾರ್ವಭೌಮ ಬಗಲಿ ಅವರು ದಿ ಫೈಲ್‌ ವರದಿಗಳನ್ನಾಧರಿಸಿಯೇ ಲೋಕಾಯುಕ್ತಕ್ಕೆ ಸಚಿವ ಸುಧಾಕರ್‌, ಹಿರಿಯ ಐಎಎಸ್‌ ಅಧಿಕಾರಿಗಳ ವಿರುದ್ಧ ದಾಖಲೆ ಸಮೇತ ದೂರು ಸಲ್ಲಿಸಿದ್ದಾರೆ. ಈ ದೂರುಗಳನ್ನಾಧರಿಸಿ ಲೋಕಾಯುಕ್ತರು ಈಗಾಗಲೇ ಹಲವು ಅಧಿಕಾರಿಗಳಿಂದ ವಿವರಣೆ ಕೇಳಿ ನೋಟೀಸ್‌ ಕೂಡ ಜಾರಿಗೊಳಿಸಿದ್ದರು. ಸಾರ್ವಜನಿಕ ಲೆಕ್ಕ ಪತ್ರ ಸಮಿತಿ ಈಗಾಗಲೇ ವಿಶೇಷ ಲೆಕ್ಕ ಪರಿಶೋಧನೆ ಮಾಡುವಂತೆ ಸಿಎಜಿಗೆ ಸೂಚಿಸಿ ಪತ್ರವನ್ನೂ ಬರೆದಿತ್ತು.

 

 

ಭ್ರಷ್ಟಾಚಾರದ 50 ಮುಖಗಳ ಸಂಕ್ಷಿಪ್ತ ಮಾಹಿತಿ ಮತ್ತು ಅದರ ಲಿಂಕ್‌ನ್ನು ಇಲ್ಲಿ ಕೊಡಲಾಗಿದೆ.

 

 

ಪಿಪಿಇ ಕಿಟ್‌ಗಳ ಗುಣಮಟ್ಟದ ಬಗ್ಗೆ ಅನುಮಾನಗಳು ವ್ಯಕ್ತವಾಗಿದ್ದ ಹೊತ್ತಿನಲ್ಲಿಯೂ ಕರ್ನಾಟಕ ಡ್ರಗ್‌ ಅಂಡ್‌ ಲಾಜಿಸ್ಟಿಕ್‌ ಸಂಸ್ಥೆ ವಿಶ್ವಾಸರ್ಹವಲ್ಲದ ಪಿಪಿಇ ಕಿಟ್‌ಗಳನ್ನು ಖರೀದಿಸಿತ್ತು. ಈ ಸಂಸ್ಥೆ ಖರೀದಿಸಿದ್ದ ಪಿಪಿಇ ಕಿಟ್‌ಗಳನ್ನೇ ರಾಜಸ್ಥಾನ ಸರ್ಕಾರ ಬಳಕೆಗೆ ಯೋಗ್ಯವಲ್ಲವೆಂದು ಹಿಂದಿರುಗಿಸಿತ್ತಲ್ಲದೇ ವಿಶ್ವಾಸರ್ಹವಲ್ಲವೆಂದು ಅವುಗಳನ್ನು ಬಳಕೆಯಿಂದಲೇ ಕೈ ಬಿಟ್ಟಿತ್ತು. ಈ ಕುರಿತು ‘ದಿ ಫೈಲ್‌’ 2020ರ ಏಪ್ರಿಲ್‌ 21ರಂದೇ ವರದಿ ಪ್ರಕಟಿಸಿತ್ತು.

1. ವಿಶ್ವಾಸರ್ಹವಲ್ಲವೆಂದು ರಾಜಸ್ಥಾನ ಕೈ ಬಿಟ್ಟ ಕಿಟ್‌ಗಳನ್ನು ಖರೀದಿಸಿತೇ ? (ಏಪ್ರಿಲ್‌ 21,2020)

https://stack.thefile.in/2020/04/governance/3409/

2. ಇನ್ನು, ವೈದ್ಯಕೀಯ ಸಲಕರಣೆಗಳ ಉತ್ಪಾದಕರಿಂದ ಖರೀದಿಸಬೇಕಿದ್ದ ಡ್ರಗ್‌ ಅಂಡ್‌ ಲಾಜಿಸ್ಟಿಕ್‌ ಸಂಸ್ಥೆ, ಕೃಷಿ ಉತ್ಪನ್ನಗಳ ತಯಾರಿಕೆ ಕಂಪನಿ ಮತ್ತು ವೆಬ್‌ಸೈಟ್‌ ಡಿಸೈನ್‌ ಮಾಡುವ ಕಂಪನಿಯಿಂದ 3 ಕೋಟಿ ರು. ಮೌಲ್ಯದ ಪಿಪಿಇ ಕಿಟ್‌ಗಳನ್ನು ಖರೀದಿಸಿತ್ತು.

ಉತ್ಪಾದಕರಲ್ಲದವರಿಗೆ 3 ಕೋಟಿ ಮೌಲ್ಯದ ಪಿಪಿಇ ಕಿಟ್‌ ಖರೀದಿ ಆದೇಶ (ಏಪ್ರಿಲ್‌ 27,2020)

https://stack.thefile.in/2020/04/governance/3492/

3. ಕರ್ನಾಟಕ ಡ್ರಗ್‌ ಲಾಜಿಸ್ಟಿಕ್‌ ಸಂಸ್ಥೆ ನಿರ್ದಿಷ್ಟ ಐವರು ಸರಬರಾಜುದಾರರಿಂದ 19 ಕೋಟಿ ರು.ಮೊತ್ತದಲ್ಲಿ ಸ್ಯಾನಿಟೈಸರ್‌ ಖರೀದಿಸಿತ್ತು. ಈ ಪ್ರಕರಣದಲ್ಲಿ ಸರ್ಕಾರದ ಬೊಕ್ಕಸಕ್ಕೆ ಅಂದಾಜು 11.89 ಕೋಟಿ ರುಪಾಯಿ ನಷ್ಟವುಂಟಾಗಿದೆ ಎಂದು ಲಭ್ಯವಿರುವ ದಾಖಲೆ ಆಧರಿಸಿ ಮೇ 2,2020ರಂದು ವರದಿ ಪ್ರಕಟಿಸಿತ್ತು.
ಮೂಲ ದರ ಗುತ್ತಿಗೆ ಒಪ್ಪಂದದ ಪ್ರಕಾರ ಸ್ಯಾನಿಟೈಸರ್‌ ಸರಬರಾಜು ಮಾಡದ ಗುತ್ತಿಗೆದಾರ ಕಂಪನಿಗೆ ಅತ್ಯಲ್ಪ ಅವಧಿಯಲ್ಲೇ 250.00 ರು. ದರಕ್ಕೆ ಖರೀದಿ ಆದೇಶ ನೀಡಲಾಗಿತ್ತು.

ಸ್ಯಾನಿಟೈಸರ್‌ ಖರೀದಿಯಲ್ಲಿ ಭಾರೀ ಅಕ್ರಮ; 11 ಕೋಟಿ ನಷ್ಟ ( ಮೇ 2,2020)

https://stack.thefile.in/2020/05/governance/3552/

4. ಕೊರೊನಾ ಹಿನ್ನೆಲೆಯಲ್ಲಿ ರಾಜ್ಯಕ್ಕೆ ಸರಬರಾಜಾಗಿರುವ ಬಹುತೇಕ ವೆಂಟಿಲೇಟರ್‌ಗಳ ಮೇಲೆ ಐಎಸ್‌ಒ ಗುಣಮಟ್ಟ ಸೂಚಿಸುವ ಪ್ರಮಾಣ ಪತ್ರ ಮತ್ತು ಸೂಕ್ತ ಪುರಾವೆಗಳೇ ಇಲ್ಲ. ಹಾಗೆಯೇ ಆಸ್ಪತ್ರೆಗಳಲ್ಲಿ ಹಲವು ವರ್ಷಗಳ ಕಾಲ ಬಳಸಿರುವ, ಮುರಿದಿರುವ ಮತ್ತು ಬಳಕೆಗೆ ಯೋಗ್ಯವಲ್ಲದ ವೆಂಟಿಲೇಟರ್‌ಗಳನ್ನು ದಾಸ್ತಾನಿಗೆ ಪಡೆದಿರುವ ಪ್ರಕರಣವನ್ನು ಮೇ 4ರಂದು ಬಹಿರಂಗಪಡಿಸಿತ್ತು.

ರಾಜ್ಯಕ್ಕೆ ಪೂರೈಕೆ ಆಗಿರುವ ವೆಂಟಿಲೇಟರ್‌ಗಳ ಮೇಲೆ ಐಎಸ್‌ಒ, ಸಿಇ, ಎಫ್‌ಡಿಎ, ಉಪಕರಣ ಉತ್ಪಾದನೆ, ಮಾದರಿ ವಿವರಗಳು ಮತ್ತು ಇದಕ್ಕೆ ಸಂಬಂಧಿಸಿದಂತೆ ಯಾವ ಪುರಾವೆಗಳೂ ಇಲ್ಲ ಎಂಬುದನ್ನು ದಾಖಲೆಗಳ ಮೂಲಕ ಅಕ್ರಮದ ಇನ್ನೊಂದು ಮುಖವನ್ನು ಅನಾವರಣಗೊಳಿಸಿತ್ತು.

ಬಳಸಿ ಬಿಸಾಡಿದ್ದ ವೆಂಟಿಲೇಟರ್‌ ಖರೀದಿ; ಭ್ರಷ್ಟತೆಯ ಮತ್ತೊಂದು ಮುಖ ಅನಾವರಣ ( ಮೇ 4,2020)

https://stack.thefile.in/2020/05/governance/3566/

5. ಕಪ್ಪುಪಟ್ಟಿಯಲ್ಲಿರುವ ಕಂಪನಿಗಳಿಂದ ಗ್ಲೂಕೋಸ್‌ ಖರೀದಿ (ಮೇ 6, 2020)

ಕೇರಳ, ಒಡಿಶಾ ಸೇರಿದಂತೆ ಇನ್ನಿತರೆ ರಾಜ್ಯಗಳ ಆರೋಗ್ಯ ಇಲಾಖೆಗಳು ಕಪ್ಪು ಪಟ್ಟಿಗೆ ಸೇರಿಸಿದ್ದ ಗುಜರಾತ್‌ ಮೂಲದ ಆಕ್ಯುಲೈಫ್‌ ಕಂಪನಿಯಿಂದ ಗ್ಲೂಕೂಸ್‌ ಖರೀದಿ ಮಾಡಿದ್ದನ್ನು ಮೇ 6ರಂದು ಬಹಿರಂಗಗೊಳಿಸಿತ್ತು.

 

https://stack.thefile.in/2020/05/governance/3584/

 

6. ಉತ್ತರ ಕರ್ನಾಟಕ ಮತ್ತು ಹೈದ್ರಾಬಾದ್‌ ಕರ್ನಾಟಕದ ಹಿಂದುಳಿದ ತಾಲೂಕುಗಳಲ್ಲಿರುವ ಸಾರ್ವಜನಿಕ ಆಸ್ಪತ್ರೆಗಳಲ್ಲಿದ್ದ ಡಯಾಲಿಸಿಸ್‌ ಯಂತ್ರೋಪಕರಣಗಳನ್ನು ಬಿ ಆರ್‌ ಎಸ್‌ ಹೆಲ್ತ್‌ ಕೇರ್‌ ಕಂಪನಿಗೆ ಕನಿಷ್ಠ ದರಕ್ಕೆ ಮಾರಾಟ ಮಾಡಿತ್ತು. ಈ ಕಂಪನಿ ನೀಡಿದ್ದ ದರವನ್ನೇ ಸಂಸ್ಥೆ ಅನುಮೋದಿಸಿತ್ತು.

 

 

ಕುತಂತ್ರ; ಬಿ ಆರ್‌ ಶೆಟ್ಟಿ ಕಂಪನಿ ಪಾಲಾಗಿವೆ ಸರ್ಕಾರಿ ಆಸ್ಪತ್ರೆಗಳ ಡಯಾಲಿಸಿಸ್‌ ಯಂತ್ರ ( ಮೇ 7, 2020)

https://stack.thefile.in/2020/05/governance/3598/

7. ಮದ್ರಾಸ್‌ ಸರ್ಜಿಕಲ್ಸ್‌ ಸೇರಿದಂತೆ ಇನ್ನಿತರೆ ಕಂಪನಿಗಳಿಂದ ದುಬಾರಿ ದರದಲ್ಲಿ ಸಿರಿಂಜ್‌ ಉಪಕರಣ ಸೇರಿದಂತೆ ಮಲ್ಟಿ ಪ್ಯಾರಾ ಮೀಟರ್‌ಗಳನ್ನು ಖರೀದಿಸಿದ್ದ ಕರ್ನಾಟಕ ಡ್ರಗ್‌ ಲಾಜಿಸ್ಟಿಕ್‌ ಸಂಸ್ಥೆ ಅಕ್ರಮ ನಡೆಸಿದ್ದನ್ನು ಮೇ 11ರಂದು ದಾಖಲೆ ಸಮೇತ ಹೊರಗೆಡವಿತ್ತು.

 

 

ಸಿರಿಂಜ್‌ ಉಪಕರಣಗಳ ಖರೀದಿಯಲ್ಲೂ ಅಕ್ರಮ; ಕೋಟಿ ರು.ನಷ್ಟ ( ಮೇ 11, 2020)

https://stack.thefile.in/2020/05/governance/3637/

8. ಮೆಡಿ ಅರ್ಥ್‌ ಕೇರ್‌ ಲಿಮಿಟೆಡ್‌ನಿಂದ ಖರೀದಿಸಿದ್ದ ಉಪಕರಣಗಳಲ್ಲಿಯೂ ಸರ್ಕಾರಕ್ಕೆ ನಷ್ಟವುಂಟಾಗಿತ್ತು. ಈ ಕುರಿತಾದ ವರದಿಯನ್ನು ಮೇ 22ರಂದು ಪ್ರಕಟಿಸಿತ್ತು.

 

 

ಮಾಸ್ಕ್‌, ಮಲ್ಟಿ ಪ್ಯಾರಾ ಮೀಟರ್‌ ಖರೀದಿಯಲ್ಲೂ ಅಕ್ರಮ; ದರದಲ್ಲಿ ಭಾರೀ ವ್ಯತ್ಯಾಸ ( ಮೇ 22,2020)

https://stack.thefile.in/2020/05/governance/3802/

9. ಕೇವಲ ವೈದ್ಯಕೀಯ ಉಪಕರಣಗಳ ಖರೀದಿಯಲ್ಲಷ್ಟೇ ಅಲ್ಲದೇ ಕೋವಿಡ್‌ 19ಕ್ಕೆ ಸಂಬಂಧಿಸಿದಂತೆ ಜಾಗೃತಿ ಮೂಡಿಸುವ ಉದ್ದೇಶದಿಂದ ಪ್ರಚಾರಕ್ಕಾಗಿ ಬಾಡಿಗೆ ಆಧಾರದ ಮೇಲೆ ವಾಹನಗಳನ್ನು ಪಡೆದಿದ್ದರಲ್ಲೂ ಅವ್ಯವಹಾರ ಕಂಡು ಬಂದಿತ್ತು. ವಾಹನಗಳನ್ನು ಬಳಸದೇ ಇದ್ದರೂ ವಾಹನ ಮಾಲೀಕರಿಗೆ 5 ಕೋಟಿ ರು.ಹೆಚ್ಚು ದುರುಪಯೋಗವಾಗಿತ್ತು ಎಂಬುದನ್ನು ಹೊರಗೆಡವಿತ್ತು.

 

 

ಕೋವಿಡ್‌ ಬಿಲ್ವಿದ್ಯೆ; ವಾಹನ ಬಳಸದಿದ್ದರೂ 5 ಕೋಟಿ ರು. ಪಾವತಿ ( ಮೇ 25,2020)

https://stack.thefile.in/2020/05/governance/3827/

10. ಕೆ ಎನ್‌ 95 ಮಾಸ್ಕ್‌ ಖರೀದಿಸಿದ್ದ ಕರ್ನಾಟಕ ವಿಧಾನಪರಿಷತ್‌ ಸಚಿವಾಲಯವೂ ಅಕ್ರಮದ ದುರ್ನಾತ ಬೀರಿತ್ತು. ವೈದ್ಯಕೀಯ ಶಿಕ್ಷಣ ಮತ್ತು ಆರೋಗ್ಯ ಇಲಾಖೆ ಒಂದೇ ಮಾಸ್ಕ್‌ಗೆ 2 ರೀತಿಯ ದರ ಕೊಟ್ಟು ಖರೀದಿಸುವ ಮೂಲಕ ಅವ್ಯವಹಾರ ಎಸಗಿರುವುದು ಮೇಲ್ನೋಟಕ್ಕೆ ಕಂಡು ಬಂದಿತ್ತು. ಈ ವರದಿ ಮೇ 27ರಂದು ಪ್ರಕಟವಾಗಿತ್ತು.

 

 

ಕೆ ಎನ್‌ 95 ಮಾಸ್ಕ್‌ ಖರೀದಿ; ವಿಧಾನಪರಿಷತ್‌ ಸಚಿವಾಲಯದಲ್ಲೂ ದುರ್ನಾತ ( ಮೇ 27,2020)

https://stack.thefile.in/2020/05/governance/3852/

11. ಕೋವಿಡ್‌-19ರ ನಿರ್ವಹಣೆಗಾಗಿ ರಾಜ್ಯ ಮತ್ತು ಸ್ಥಳೀಯ ಮಟ್ಟದಲ್ಲಿ ವೈದ್ಯಕೀಯ ಪರಿಕರಗಳ ಖರೀದಿಯಲ್ಲಾಗಿರುವ ಅಕ್ರಮಗಳ ಕುರಿತು ಆಡಳಿತ ಪಕ್ಷದ ಶಾಸಕ ಮುರುಗೇಶ್‌ ನಿರಾಣಿ ಕೂಡ ಸಾರ್ವಜನಿಕ ಲೆಕ್ಕಪತ್ರ ಸಮಿತಿಯಲ್ಲೂ ಬಾಯ್ಬಿಟ್ಟಿದ್ದರು. ಅಲ್ಲದೆ ಈ ಸಂಬಂಧ ತಮ್ಮ ಬಳಿ ಪೆನ್‌ ಡ್ರೈವ್‌ ಇರುವುದಾಗಿ ಹೇಳಿಕೆ ನೀಡಿದ್ದ ಅವರು, ಅದರಲ್ಲಿ 125 ಪುಟಗಳ ದಾಖಲೆಗಳೂ ಇವೆ ಎಂಬುದನ್ನು ಸಮಿತಿ ಸಭೆಯಲ್ಲಿ ಹೇಳಿದ್ದನ್ನು ಜೂನ್‌ 3ರಂದು ನಡವಳಿ ಸಮೇತ ವರದಿ ಮಾಡಿತ್ತು.

 

 

ಕೋವಿಡ್‌ ಭ್ರಷ್ಟಾಚಾರ; ಪೆನ್‌ ಡ್ರೈವ್‌ನಲ್ಲಿ ದಾಖಲೆ ಒದಗಿಸಿದ ಶಾಸಕ ಮುರುಗೇಶ್‌ ನಿರಾಣಿ?

https://stack.thefile.in/2020/06/governance/3954/

12. ಕೋವಿಡ್‌ ಹಿನ್ನೆಲೆಯಲ್ಲಿ ಲಾಕ್‌ಡೌನ್ ಜಾರಿಯಾಗಿದ್ದ ಅವಧಿಯಲ್ಲಿ ಕಾರ್ಮಿಕ ಇಲಾಖೆ ಖರ್ಚು ಮಾಡಿದ್ದ 800 ಕೋಟಿ ರು.ಗಳ ವಿವರವನ್ನು ಬಾಬ್ತುವಾರು ಜೂನ್‌ 16ರಂದು ವರದಿ ಪ್ರಕಟಿಸಿತ್ತು.

 

 

ಆಹಾರ ಪ್ಯಾಕೇಟ್‌ ಕಿಟ್‌ಗೆ 69.90 ಕೋಟಿ, 739 ಕೋಟಿ ರು ಪರಿಹಾ; ಹುಬ್ಬೇರಿಸಿದೆ ಖರ್ಚಿನ ಲೆಕ್ಕ

https://stack.thefile.in/2020/06/governance/4063/

13. ಸ್ಪೀಕರ್‌ ಕಾಗೇರಿ ಪ್ರತಿನಿಧಿಸುವ ಶಿರಸಿ ಕ್ಷೇತ್ರದ ತೋಟಗಾರ್ಸ್‌ ಸೊಸೈಟಿಯು ವಲಸಿಗ ಕಾರ್ಮಿಕರಿಗೆ ಆಹಾರ ಧಾನ್ಯ ಕಿಟ್‌ ಒದಗಿಸಿದ್ದರೂ ದರದ ಮಾಹಿತಿಯನ್ನು ಒದಗಿಸಿರಲಿಲ್ಲ ಎಂಬುದದನ್ನು ಜೂನ್‌ 17ರಂದು ದಾಖಲೆ ಸಮೇತ ಹೊರಗೆಡವಿತ್ತು.

 

 

ತೋಟಗಾರ್ಸ್‌ ಸೊಸೈಟಿಯಿಂದಲೂ ಆಹಾರ ಧಾನ್ಯ ಕಿಟ್‌ ಖರೀದಿ; ದರದ ಮಾಹಿತಿ ಒದಗಿಸದ ಇಲಾಖೆ?

https://stack.thefile.in/2020/06/governance/4071/

14. ಎಸ್‌ ಎಂ ಫಾರ್ಮಾಸ್ಯುಟಿಕಲ್ಸ್‌ ಕಂಪನಿ ದುಪ್ಪಟ್ಟು ದರದಲ್ಲಿ ಸರಬರಾಜು ಮಾಡಿದ್ದ ಸ್ಯಾನಿಟೈಸರ್‌ ಗುಣಮಟ್ಟದಿಂದ ಕೂಡಿರಲಿಲ್ಲವೆಂದು ಔಷಧ ನಿಯಂತ್ರಣ ಪ್ರಾಧಿಕಾರ ವರದಿ ನೀಡಿದ್ದನ್ನು ದಾಖಲೆ ಸಮೇತ ಜೂನ್‌ 20ರಂದು ಬಹಿರಂಗಗೊಳಿಸಿತ್ತು.

 

 

ರಾಮನಗರ, ಕಲ್ಬುರ್ಗಿಗೆ ಕಳಪೆ ಸ್ಯಾನಿಟೈಸರ್‌ ಪೂರೈಕೆ; ಔಷಧ ನಿಯಂತ್ರಣ ಪ್ರಾಧಿಕಾರ ವರದಿ

https://stack.thefile.in/2020/06/governance/4097/

15. ವೈದ್ಯಕೀಯ ಶಿಕ್ಷಣ ಇಲಾಖೆಯು ತಜ್ಞರ ಶಿಫಾರಸ್ಸಿಲ್ಲದೆಯೇ ಪಿಪಿಇ ಕಿಟ್‌,ಮಾಸ್ಕ್‌ ಸೇರಿದಂತೆ ಇನ್ನಿತರೆ ಉಪಕರಣಗಳನ್ನು ಖರೀದಿಸಿತ್ತು. ಅಲ್ಲದೆ ಅಂದಾಜು ವೆಚ್ಚವನ್ನು 815 ಕೋಟಿ ರು.ಗೆ ಏರಿಕೆ ಮಾಡಿದ್ದರೂ ಅದಕ್ಕೆ ಸೂಕ್ತ ಸಮರ್ಥನೆಯನ್ನು ನೀಡಿರಲಿಲ್ಲ ಎಂಬುದನ್ನು ಟಿಪ್ಪಣಿ ಹಾಳೆ ಸಮೇತ ಜೂನ್ 24ರಂದು ಬಯಲು ಮಾಡಿತ್ತು.

 

 

ತಜ್ಞರ ಶಿಫಾರಸ್ಸಿಲ್ಲದೆಯೇ ಪಿಪಿಇ ಕಿಟ್‌, ಮಾಸ್ಕ್‌ಮ ಉಪಕರಣ ಖರೀದಿ; 815 ಕೋಟಿ ರು.ಏರಿಕೆ ಗುಟ್ಟೇನು?

https://stack.thefile.in/2020/06/governance/4127/

16. ಲಾಕ್‌ಡೌನ್ ಜಾರಿಯಲ್ಲಿದ್ದ ಏಪ್ರಿಲ್‌ ಮತ್ತು ಮೇ ತಿಂಗಳಲ್ಲಿ ಆರೋಗ್ಯ ಇಲಾಖೆಯು 3,322 ಕೋಟಿ ರು.ಗಳನ್ನು ಖರ್ಚು ಮಾಡಿದ್ದರೂ ವೆಚ್ಚದ ವಿವರಗಳನ್ನು ಕರ್ನಾಟಕ ಪ್ರಗತಿ ಪರಿಶೀಲನಾ ಸಭೆಗೆ ಒದಗಿಸಿರಲಿಲ್ಲ ಎಂಬುದನ್ನು ಜೂನ್‌ 27ರಂದು ವರದಿ ಮಾಡಿತ್ತು.

 

 

3,322 ಕೋಟಿ ಖರ್ಚು ಮಾಡಿದ ಆರೋಗ್ಯ ಇಲಾಖೆ ಬಳಿ ವೆಚ್ಚದ ವಿವರಗಳೇ ಇಲ್ಲ

 

https://stack.thefile.in/2020/06/governance/4165/

 

 

17. ಆರೋಗ್ಯ ಇಲಾಖೆ ಮಾತ್ರವಲ್ಲದೆ ಸಮಾಜ ಕಲ್ಯಾಣ ಇಲಾಖೆಯೂ ಸ್ಯಾನಿಟೈಸರ್‌, ಥರ್ಮಲ್‌ ಸ್ಕ್ಯಾನಿಂಗ್‌ ಉಪಕರಣಗಳನ್ನು ದುಬಾರಿ ದರದಲ್ಲಿ ಖರೀದಿಸಿದ್ದನ್ನು ಜುಲೈ 2 ರಂದು ವರದಿ ಪ್ರಕಟಿಸಿತ್ತು.

ಸ್ಯಾನಿಟೈಸರ್‌, ಥರ್ಮಲ್‌ ಸ್ಕ್ಯಾನಿಂಗ್‌ ಖರೀದಿಯಲ್ಲಿ ಅವ್ಯವಹಾರ; ಕಾರಜೋಳರ ಸ್ವಂತ ಕಲ್ಯಾಣ ?

https://stack.thefile.in/2020/07/governance/4219/

18. ಸಾರ್ವಜನಿಕ ಲೆಕ್ಕಪತ್ರ ಸಮಿತಿಯಲ್ಲಿ ಭಾಗವಹಿಸಿದ್ದ ಮುರುಗೇಶ್‌ ನಿರಾಣಿ ಅವರು ಪೆನ್‌ ಡ್ರೈವ್‌ ಒದಗಿಸದೇ ಪಲಾಯನಗೈದಿದ್ದರು. ಈ ಸಂಬಂಧ ಜುಲೈ 6ರಂದು ನಡವಳಿ ಸಮೇತ ವರದಿಯನ್ನು ಪ್ರಕಟಿಸಿತ್ತು.

ಕೋವಿಡ್‌ ಭ್ರಷ್ಟಾಚಾರ; ನಿರಾಣಿ ಪೆನ್‌ಡ್ರೈವ್‌ನಲ್ಲಿನ 125 ಪುಟಗಳ ದಾಖಲೆಗಳೇನಾದವು?

https://stack.thefile.in/2020/07/governance/4252/

19. ಮಾಸ್ಕ್‌ ಖರೀದಿಯಲ್ಲಿ ವಿಧಾನಪರಿಷತ್‌ ಸಚಿವಾಲಯದ ಉನ್ನತ ಅಧಿಕಾರಿಯೊಬ್ಬರು ಶಾಮೀಲಾಗಿದ್ದಾರೆ ಎಂಬ ಕುರಿತು ದಾಖಲೆ ಸಮೇತ ಜುಲೈ 6 ರಂದು ಬಯಲು ಮಾಡಿತ್ತು.

 

 

ಮಾಸ್ಕ್‌ ಖರೀದಿ; ವಿಧಾನ ಪರಿಷತ್‌ ಸಚಿವಾಲಯದ ಉನ್ನತ ಅಧಿಕಾರಿಗೆ ಖಾಸಗಿ ಆಸ್ಪತ್ರೆ ನಂಟು?

 

 

20. ಕೋವಿಡ್‌ ಭ್ರಷ್ಟಾಚಾರದ ಬಗ್ಗೆ 125 ಪುಟಗಳ ದಾಖಲೆ ನೀಡದೇ ಮುರುಗೇಶ್‌ ನಿರಾಣಿ ಅವರು ಪಲಾಯನಗೈದಿದ್ದರ ಕುರಿತು ಜುಲೈ 9ರಂದು ವರದಿ ಮಾಡಿತ್ತು.

 

 

ಕೋವಿಡ್‌ ಭ್ರಷ್ಟಾಚಾರ; ಪೆನ್‌ ಡ್ರೈವ್‌ ದಾಖಲೆ ನೀಡದೇ ಪಲಾಯನಗೈದ ನಿರಾಣಿ? ( ಜುಲೈ 9)

https://stack.thefile.in/2020/07/governance/4292/

21. ಶಾಸಕರ ಭವನದ ಕೊಠಡಿಗಳಿಗೆ ಮತ್ತು ವಿಧಾನಸಭೆ ಸಚಿವಾಲಯದ ಅಧೀನದಲ್ಲಿರುವ ಕೊಠಡಿಗಳಿಗೆ ಸ್ಯಾನಿಟೈಸೇಷನ್‌ ಮಾಡಲು 11.76 ಕೋಟಿ ರು. ಮೊತ್ತಕ್ಕೆ ಗುತ್ತಿಗೆ ನೀಡಿದ್ದನ್ನು ಜುಲೈ 10ರಂದು ಹೊರಗೆಡವಿತ್ತು.

 

 

ಶಾಸಕರ ಭವನದ ಕೊಠಡಿಗಳಿಗೆ ಸ್ಯಾನಿಟೈಸೇಷನ್‌; ವರ್ಷಕ್ಕೆ 11.76 ಕೋಟಿ ಅಂದಾಜು ವೆಚ್ಚ ?

 

https://stack.thefile.in/2020/07/legislature/4303/

 

 

22. ಕೋವಿಡ್‌ ಭ್ರಷ್ಟಾಚಾರದ ಕುರಿತು ದನಿ ಎತ್ತಿದ್ದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ವೈದ್ಯಕೀಯ ಉಪಕರಣಗಳ ಖರೀದಿ ಸಂಬಂಧ ಸರ್ಕಾರ ಒದಗಿಸಿದ್ದ ಮಾಹಿತಿಯಲ್ಲಿ ಕಂಪನಿಗಳ ವಿವರವೇ ಇರಲಿಲ್ಲ ಎಂಬುದನ್ನು ಜುಲೈ 11ರಂದು ಬಯಲು ಮಾಡಿತ್ತು.

 

 

ಕೋವಿಡ್‌ ಭ್ರಷ್ಟಾಚಾರ; ಸಿದ್ದರಾಮಯ್ಯಗೆ ಒದಗಿಸಿರುವ ಮಾಹಿತಿಯಲ್ಲಿ ಕಂಪನಿಗಳ ವಿವರಗಳೇ ಇಲ್ಲ

https://stack.thefile.in/2020/07/governance/4307/

23. ಬಳ್ಳಾರಿಯಲ್ಲಿರುವ ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಯು ದುಬಾರಿ ದರದಲ್ಲಿ ಪಿಪಿಇ ಕಿಟ್‌ ಖರೀದಿಸಿತ್ತು ಎಂಬುದನ್ನು ಜುಲೈ 13ರಂದು ಬಹಿರಂಗಗೊಳಿಸಿತ್ತು.

ಪಿಪಿಇ ಕಿಟ್‌ಗೆ ದುಪ್ಪಟ್ಟು ದರ; ಬಳ್ಳಾರಿ ವಿಮ್ಸ್‌ನಲ್ಲೂ ಭ್ರಷ್ಟಾಚಾರ ? ( ಜುಲೈ 14)

https://stack.thefile.in/2020/07/governance/4317/

24. ಕೋವಿಡ್‌-19 ರ ಹಿನ್ನೆಲೆಯಲ್ಲಿ ವೈದ್ಯಕೀಯ ಸಲಕರಣೆಗಳ ಖರೀದಿಗೆ ಜಿಲ್ಲಾ ವಿಪತ್ತು ನಿಧಿಯನ್ನು ಬಳಸಿಕೊಂಡಿದ್ದ ಜಿಲ್ಲಾಡಳಿತಗಳು ಅದರ ಮಾಹಿತಿಯನ್ನು ಮುಚ್ಚಿಡುತ್ತಿವೆ ಎಂದು ಜುಲೈ 14ರಂದು ವರದಿ ಮಾಡಿತ್ತು.

https://stack.thefile.in/2020/07/governance/4334/

25. ವೈದ್ಯಕೀಯ ಶಿಕ್ಷಣ ಇಲಾಖೆಯು ಕೋವಿಡ್‌-19ರ ನಿರ್ವಹಣೆ ಹೆಸರಿನಲ್ಲಿ ಮಾರ್ಚ್‌, ಏಪ್ರಿಲ್‌ನಲ್ಲಿ ಮಾಡಿದ್ದ 33.00 ಕೋಟಿ ರು.ಗಳ ಮೊತ್ತಕ್ಕೆ ತರಾತುರಿಯಲ್ಲಿ ಸಂಪುಟದ ಅನುಮೋದನೆ ಪಡೆಯಲು ಹೊರಟಿದ್ದನ್ನು ಜುಲೈ 15ರಂದು ಮುನ್ನೆಲೆಗೆ ತಂದಿತ್ತು.

ಕೋವಿಡ್‌-19; 33.00 ಕೋಟಿ ಮೊತ್ತದ ಪ್ರಸ್ತಾವನೆಗೆ ಘಟನೋತ್ತರ ಅನುಮೋದನೆ ತರಾತುರಿ ?

https://stack.thefile.in/2020/07/governance/4346/

26. ವೆಂಟಿಲೇಟರ್‌ ಖರೀದಿಯಲ್ಲಿ ಭಾರೀ ಅಕ್ರಮ ನಡೆದಿದ್ದರ ಕುರಿತು ಬೆನ್ನೆತ್ತಿದ್ದ ‘ದಿ ಫೈಲ್‌’ ತನಿಖಾ ತಂಡ ತಮಿಳುನಾಡು ಸರ್ಕಾರ ಖರೀದಿಸಿದ್ದ ದರಕ್ಕೂ ಕರ್ನಾಟಕ ಸರ್ಕಾರ ಖರೀದಿಸಿದ್ದ ದರದಲ್ಲಿನ ವ್ಯತ್ಯಾಸವನ್ನು ಜುಲೈ 16ರಂದು ಹೊರಗೆಡವಿತ್ತು.

ವೆಂಟಿಲೇಟರ್‌ ಖರೀದಿಯಲ್ಲಿ ಭಾರೀ ಅಕ್ರಮ; ತಮಿಳುನಾಡಿನಲ್ಲಿ 4.78 ಲಕ್ಷ, ಕರ್ನಾಟಕದಲ್ಲಿ 18 ಲಕ್ಷ

https://stack.thefile.in/2020/07/governance/4355/

27. ಚೀನಾದ ಬಿವೈಡಿ ಕಂಪನಿಯಿಂದ ಮಾಸ್ಕ್‌ ಖರೀದಿಸಿದ್ದರೂ ಕಂಪನಿಯ ಹೆಸರನ್ನು ಮುಚ್ಚಿಟ್ಟಿದ್ದರ ಬಗ್ಗೆ ಜುಲೈ 20ರಂದು ವರದಿ ಮಾಡಿತ್ತು.

ಚೀನಾದ ಬಿವೈಡಿ ಕಂಪನಿಯಿಂದ ಮಾಸ್ಕ್‌ ಖರೀದಿ; ಮಾಹಿತಿ ಮುಚ್ಚಿಟ್ಟ ಆರೋಗ್ಯ ಇಲಾಖೆ

https://stack.thefile.in/2020/07/governance/4388/

28. ಕೋವಿಡ್‌-19ರ ಹೆಸರಿನಲ್ಲಿ ಖರೀದಿಸಿದ್ದ ವೈದ್ಯಕೀಯ ಪರಿಕರಗಳಿಗೆ ಸಂಬಂಧಿಸಿದಂತೆ ಸರ್ಕಾರ ಬಿಡುಗಡೆಗೊಳಿಸಿದ್ದ ಅಂಕಿ ಅಂಶಗಳಲ್ಲಿನ ವ್ಯತ್ಯಾಸವನ್ನೂ ಜುಲೈ 20ರಂದು ಸಾಕ್ಷ್ಯಾಧಾರಗಳ ಸಮೇತ ಬಹಿರಂಗಗೊಳಿಸಿತ್ತು.

ಕೋವಿಡ್‌ ಭ್ರಷ್ಟಾಚಾರ; ಬಿಡುಗಡೆ ಮಾಡಿದ ಅಂಕಿ ಅಂಶಗಳಲ್ಲಿ ರಾಮ, ಕೃಷ್ಣನ ಲೆಕ್ಕವೆಷ್ಟು?

https://stack.thefile.in/2020/07/governance/4393/

29. ಕಳಪೆ ವೆಂಟಿಲೇಟರ್‌ ಖರೀದಿ ಕುರಿತು ಬಿಜೆಪಿ ಮಾಜಿ ಶಾಸಕ ಸಾರ್ವಭೌಮ ಬಗಲಿ ಅವರು ಲೋಕಾಯುಕ್ತಕ್ಕೆ ನೀಡಿದ್ದ ದೂರಿನ ಕುರಿತು ಜುಲೈ 21ರಂದು ವರದಿ ಮಾಡಿತ್ತು.

ಕಳಪೆ ವೆಂಟಿಲೇಟರ್‌ ಖರೀದಿ; ಬಿಜೆಪಿ ಮಾಜಿ ಶಾಸಕರ ದೂರಿನ ಮೇಲೆ ವಿವರಣೆ ಕೇಳಿದ ಲೋಕಾಯುಕ್ತ

https://stack.thefile.in/2020/07/acb-lokayukta/4398/

30. ಕೋವಿಡ್‌-19ನಿಂದ ಬಳಲುತ್ತಿದ್ದ ಮಕ್ಕಳಿಗೆ ಆಮ್ಲಜನಕ ಪೂರೈಸುವ ಸಾಧನವನ್ನು ಕೇರಳ ಸರ್ಕಾರ ಖರೀದಿಸಿದ್ದ ದರಕ್ಕಿಂತಲೂ ದುಪ್ಪಟ್ಟು ದರ ನೀಡಿ ಖರೀದಿಸಿದ್ದನ್ನು ಜುಲೈ 22ರಂದು ಬಯಲು ಮಾಡಿತ್ತು.

ಆಕ್ಸಿಜನ್‌ ಉಪಕರಣಕ್ಕೂ ದುಪ್ಪಟ್ಟು ದರ; ಕೇರಳದಲ್ಲಿ 2.86 ಲಕ್ಷ, ಕರ್ನಾಟಕದಲ್ಲಿ 4.26 ಲಕ್ಷ

https://stack.thefile.in/2020/07/governance/4404/

31. ಅನುಭವವಿಲ್ಲದ ಆಂಧ್ರ ಕಂಪನಿಯಿಂದ 4.02 ಕೋಟಿ ರು.ಗೆ ಸ್ಯಾನಿಟೈಸರ್‌ ಖರೀದಿಸಿದ್ದನ್ನು ಜುಲೈ 24ರಂದು ದಾಖಲೆ ಸಮೇತ ವರದಿ ಮಾಡಿತ್ತು.

ಅನುಭವವಿಲ್ಲದ ಆಂಧ್ರ ಕಂಪನಿಯಿಂದ 4.02 ಕೋಟಿ ರು.ಗೆ ಸ್ಯಾನಿಟೈಸರ್‌ ಖರೀದಿ; ಪ್ರಭಾವಿ ಸಚಿವರ ನಂಟು ?

https://stack.thefile.in/2020/07/governance/4430/

32. ಕೋವಿಡ್‌ ಹೆಸರಿನಲ್ಲಿ ಖರೀದಿ ಆಗಿದ್ದ ವೈದ್ಯಕೀಯ ಉಪಕರಣಗಳಿಗೆ ದುಬಾರಿ ದರ ನೀಡಿತ್ತು ಎಂಬ ಆರೋಪವನ್ನು ಖುದ್ದು ಬಿಜೆಪಿ ಶಾಸಕ ಹಾಗೂ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಸದಸ್ಯ ಮುರುಗೇಶ್‌ ನಿರಾಣಿ ಅವರು ಸಭೆಯಲ್ಲಿ ಪ್ರಸ್ತಾಪಿಸಿದ್ದನ್ನೇ ಬಿಜೆಪಿಯ ಮಾಜಿ ಶಾಸಕ ಬಗಲಿ ಕೂಡ ಲೋಕಾಯುಕ್ತಕ್ಕೆ ಸಲ್ಲಿಸಿದ್ದ ಹೆಚ್ಚುವರಿ ದಾಖಲೆಯಲ್ಲಿ ಪೆನ್‌ ಡ್ರೈವ್‌ ಕುರಿತು ಪ್ರಸ್ತಾಪಿಸಿದ್ದರು.

ಕೋವಿಡ್‌ ಭ್ರಷ್ಟಾಚಾರ ಬೆನ್ನೆತ್ತಿದ ಬಿಜೆಪಿ ಮಾಜಿ ಶಾಸಕ ಬಗಲಿ; ಲೋಕಾಯುಕ್ತಕ್ಕೆ ಸಲ್ಲಿಸಿದ ಹೆಚ್ಚುವರಿ ದಾಖಲೆಯಲ್ಲಿ ನಿರಾಣಿ ಪೆನ್‌ ಡ್ರೈವ್‌ ಪ್ರಸ್ತಾಪ

https://stack.thefile.in/2020/07/governance/4477/

 

33. ಸ್ಯಾನಿಟೈಸರ್ ಖರೀದಿಯಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ ಎಂದು ಎದೆ ತಟ್ಟಿಕೊಂಡು ಬಿಜೆಪಿ ಸರ್ಕಾರ ಹೇಳಿದ್ದರ ಬೆನ್ನಲ್ಲೇ 13 ಕೋಟಿ ನಷ್ಟದ ಕುರಿತಾದ ದಾಖಲೆಗಳನ್ನು ‘ದಿ ಫೈಲ್‌’ ಹೊರಗೆಡವಿತ್ತು.

ಸ್ಯಾನಿಟೈಸರ್‌ ಖರೀದಿಯಲ್ಲಿ 13 ಕೋಟಿ ನಷ್ಟ; ದಾಖಲೆ ಬಿಡುಗಡೆ ನಂತರವೂ ಹೊರಬಿತ್ತು ಅಕ್ರಮ (ಜುಲೈ 27)

https://stack.thefile.in/2020/07/governance/4500/

34. ಆರ್‌ಟಿಪಿಸಿಆರ್‌ ಕಿಟ್‌ ಖರೀದಿಯಲ್ಲೂ ಅವ್ಯವಹಾರದ ವಾಸನೆ ಬಡಿದಿತ್ತು. ಈ ಸಂಬಂಧ ದಾಖಲೆಗಳನ್ನಾಧರಿಸಿ ವರದಿ ಪ್ರಕಟಿಸಿತ್ತಲ್ಲದೆ 4 ಪಟ್ಟು ಹೆಚ್ಚುವರಿ ದರವನ್ನು ಹೇಗೆ ನೀಡಲಾಗಿದೆ ಎಂಬುದನ್ನು ನಿರೂಪಿಸಿತ್ತು.

ಆರ್‌ಟಿಪಿಸಿಆರ್‌ ಕಿಟ್‌ಗೆ 4 ಪಟ್ಟು ಹೆಚ್ಚುವರಿ ದರ; ಕೊಟೇಷನ್‌ನಲ್ಲಿ ಅಡಗಿದೆಯೇ ಸಂಚು?(ಜುಲೈ 28)

https://stack.thefile.in/2020/07/governance/4516/

35. ಆರ್‌ಟಿಪಿಸಿಆರ್‌ ಉಪಕರಣವೊಂದಕ್ಕೆ 4 ಪಟ್ಟು ಹೆಚ್ಚುವರಿ ದರವನ್ನು ಪಾವತಿಸಿದ್ದ ಸರ್ಕಾರ, ಖರೀದಿ ದರವನ್ನು ಬಹಿರಂಗಪಡಿಸದೇ ಮುಚ್ಚಿಟ್ಟಿದ್ದನ್ನು ಬಹಿರಂಗಗೊಳಿಸಿತ್ತು.

ಆರ್‌ಟಿಪಿಸಿಆರ್‌ ಖರೀದಿ ದರದಲ್ಲಿ ಮುಚ್ಚುಮರೆ; ತೆಲಂಗಾಣ ಕಂಪನಿಯಿಂದ ವಂಚನೆ

36. ತಯಾರಿಕೆ ಕಂಪನಿಗಳಿಂದ ಮಾಸ್ಕ್‌ ಖರೀದಿಸದೆಯೇ ಸಾಫ್ಟ್‌ವೇರ್‌ ಕಂಪನಿಗಳಿಂದ ಖರೀದಿಸಿದ್ದನ್ನು ಬಯಲುಗೊಳಿಸಿತ್ತು.

ಸಾಫ್ಟ್‌ವೇರ್‌ ಕಂಪನಿಗಳಿಂದಲೂ ಮಾಸ್ಕ್‌ ಖರೀದಿ; ಹಲವು ಕಂಪನಿಗಳ ವಿವರ ಮುಚ್ಚಿಟ್ಟ ಸರ್ಕಾರ (ಆಗಸ್ಟ್‌ 1)

https://stack.thefile.in/2020/08/governance/4569/

37. ಕೋವಿಡ್‌-19 ಭ್ರಷ್ಟಾಚಾರ ಕುರಿತಾದ ಸರಣಿ ರೂಪದಲ್ಲಿ ‘ದಿ ಫೈಲ್‌’ ವರದಿಗಳನ್ನು ಪ್ರಕಟಿಸುತ್ತಿದ್ದರೆ ಅತ್ತ ಸಾರ್ವಜನಿಕ ಲೆಕ್ಕಪತ್ರ ಸಮಿತಿಯೂ ವಿಶೇಷ ಲೆಕ್ಕ ಪರಿಶೋಧನೆ ನಡೆಸಲು ಸಿಎಜಿಗೆ ಸೂಚಿಸಿತ್ತು.

ಕೋವಿಡ್‌-19; ವಿಶೇಷ ಲೆಕ್ಕ ಪರಿಶೋಧನೆ ನಡೆಸಲು ಸಿಎಜಿಗೆ ನಿರ್ದೇಶಿಸಿ ಇಲಾಖೆಗೆ 30 ಪ್ರಶ್ನಾವಳಿ ನೀಡಿದ ಪಿಎಸಿ (ಆಗಸ್ಟ್‌ 4)

https://stack.thefile.in/2020/08/governance/4605/

38. ಕೋವಿಡ್‌ ನಿರ್ವಹಣೆಗೆ 2,118 ಕೋಟಿ ಖರ್ಚು; ಇದು 14 ಇಲಾಖೆಗಳ ಲೆಕ್ಕ (ಆಗಸ್ಟ್‌ 5)

https://stack.thefile.in/2020/08/governance/4643/

39. ಆರ್‌ಟಿಪಿಸಿಆರ್‌ ಉಪಕರಣಗಳಿಗೆ ಹೆಚ್ಚುವರಿ ದರ ನೀಡಿದ್ದನ್ನು ‘ದಿ ಫೈಲ್‌’ ಹೊರಗೆಡವುತ್ತಿದ್ದಂತೆ ಬಿಜೆಪಿ ಮಾಜಿ ಶಾಸಕ ಡಾ ಬಗಲಿ ಅವರು ಪ್ರಕರಣವನ್ನು ಲೋಕಾಯುಕ್ತಕ್ಕೆ ಕೊಂಡೊಯ್ದರು.

ಆರ್‌ಟಿಪಿಸಿಆರ್‌; ಐಎಎಸ್‌ ಮಂಜುಶ್ರೀ ಸೇರಿ ಹಿರಿಯ ಅಧಿಕಾರಿಗಳ ವಿರುದ್ಧ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ ಬಿಜೆಪಿ ಮಾಜಿ ಶಾಸಕ (ಆಗಸ್ಟ್‌ 7)

https://stack.thefile.in/2020/08/governance/4669/

40. ಉತ್ಪಾದಕ ಕಂಪನಿಗಳಲ್ಲದವರಿಂದ ಮಾಸ್ಕ್‌ ಖರೀದಿಸಿದ್ದ ಸರ್ಕಾರ, ಸಾಫ್ಟ್‌ವೇರ್‌ ಕಂಪನಿಯಿಂದಲೂ ಪಿಪಿಇ ಕಿಟ್‌ ಖರೀದಿಸಿದ್ದ ಪ್ರಕರಣವೂ ಲೋಕಾಯುಕ್ತ ಮೆಟ್ಟಿಲೇರಿತ್ತು.

ಸಾಫ್ಟ್‌ವೇರ್‌, ಕೃಷಿ ಕಂಪನಿಯಿಂದ ಪಿಪಿಇ ಕಿಟ್‌ ಖರೀದಿ; ವರದಿ ಸಲ್ಲಿಸಲು ಲೋಕಾಯುಕ್ತ ಸೂಚನೆ (ಆಗಸ್ಟ್‌ 8)

https://stack.thefile.in/2020/08/acb-lokayukta/4682/

41. ಸ್ಯಾನಿಟೈಸರ್‌ ಖರೀದಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮ ಪ್ರಕರಣಗಳಿಗೆ ವೈದ್ಯಕೀಯ ಶಿಕ್ಷಣ ಸಚಿವ ಡಾ ಕೆ ಸುಧಾಕರ್‌ ಅವರ ಹೆಸರು ಥಳಕು ಹಾಕಿಕೊಂಡಿತ್ತಲ್ಲದೆ ಈ ಪ್ರಕರಣವೂ ಲೋಕಾಯುಕ್ತಕ್ಕೆ ಅಂಗಳಕ್ಕೆ ದಾಟಿತ್ತು.

ಸ್ಯಾನಿಟೈಸರ್‌ ಖರೀದಿಯಲ್ಲಿ ಅಕ್ರಮ; ಸಚಿವ ಸುಧಾಕರ್‌ ಸೇರಿ ಮೂವರು ಅಧಿಕಾರಿಗಳ ವಿರುದ್ಧ ದೂರು (ಆಗಸ್ಟ್‌ 10)

https://stack.thefile.in/2020/08/acb-lokayukta/4700/

42. ಇನ್ನು ವಿಧಾನಸೌಧ ಕೊಠಡಿಗಳಿಗೆ ಸ್ಯಾನಿಟೈಸೇಷನ್‌ ಮಾಡಿಸುವುದರಲ್ಲಿಯೂ ಅಕ್ರಮದ ದುರ್ನಾತ ಹರಡಿತ್ತು. ಯಾವ ದರದಲ್ಲಿ ಸ್ಯಾನಿಟೈಸೇಷನ್‌ ಮಾಡಿಸಲಾಗಿದೆ ಎಂಬುದನ್ನು ವಿಧಾನಸಭೆ ಸಚಿವಾಲಯವು ಮಾಹಿತಿಯನ್ನು ಮುಚ್ಚಿಟ್ಟಿತ್ತು.

ವಿಧಾನಸೌಧದ ಕೊಠಡಿಗಳಿಗೆ ಸ್ಯಾನಿಟೈಸೇಷನ್‌; ದರದ ಮಾಹಿತಿ ಗೌಪ್ಯವಾಗಿಟ್ಟ ಸಚಿವಾಲಯ (ಆಗಸ್ಟ್‌ 10)

https://stack.thefile.in/2020/08/legislature/4693/

43. ದುಬಾರಿ ದರಕ್ಕೆ ಖರೀದಿ ಆದೇಶ ಪಡೆದಿದ್ದ ಎಸ್‌ ಎಂ ಫಾರ್ಮಾಸ್ಯುಟಿಕಲ್ಸ್‌ ಗುಣಮಟ್ಟವಿಲ್ಲದ ಸ್ಯಾನಿಟೈಸರ್‌ ಪೂರೈಕೆ ಮಾಡಿರುವುದು ಸಾಬೀತಾಗಿದ್ದರಿಂದ ಈ ಕಂಪನಿಯನ್ನು ಕಪ್ಪು ಪಟ್ಟಿಗೆ ಸೇರಿಸಲಾಗಿತ್ತು.

ಕಳಪೆ ಸ್ಯಾನಿಟೈಸರ್‌ ಪೂರೈಕೆ; ಎಸ್‌ ಎಂ ಫಾರ್ಮಾಸ್ಯುಟಿಕಲ್ಸ್‌ ಕಪ್ಪು ಪಟ್ಟಿಗೆ (ಆಗಸ್ಟ್‌ 11)

https://stack.thefile.in/2020/08/governance/4706/

44. ಸಾಫ್ಟ್‌ವೇರ್‌ ಕಂಪನಿಗಳಿಂದ ಮಾಸ್ಕ್‌ ಖರೀದಿಸಿದ್ದ ಪ್ರಕರಣ ಲೋಕಾಯುಕ್ತ ಮೆಟ್ಟಿಲೇರಿತ್ತಲ್ಲದೆ ಈ ಸಂಬಂಧ ಅಧಿಕಾರಿಗಳಿಂದ ವಿವರಣೆ ಕೇಳಿ ನೋಟೀಸ್‌ ಕೂಡ ಜಾರಿ ಮಾಡಿತ್ತು.

ಮಾಸ್ಕ್‌ ಖರೀದಿ; ಎಸಿಎಸ್‌ ಜಾವೇದ್‌ ಅಖ್ತರ್ ಸೇರಿ ಹಲವರಿಂದ ವಿವರಣೆ ಕೇಳಿದ ಲೋಕಾಯುಕ್ತ (ಆಗಸ್ಟ್‌ 17)

https://stack.thefile.in/2020/08/acb-lokayukta/4758/

45. ಕೋವಿಡ್‌ ನಿರ್ವಹಣೆಗಾಗಿ ಆರೋಗ್ಯ ಇಲಾಖೆಗೆ ಬಿಡುಗಡೆ ಮಾಡಿದ್ದ ಅನುದಾನ ಖರ್ಚಿನ ಲೆಕ್ಕವನ್ನು ವಿಧಾನಸಭೆಯ ಅಂದಾಜು ಸಮಿತಿಯೂ ಕೇಳಿತ್ತು.

ಕೋವಿಡ್‌-19; ಆರೋಗ್ಯ ಇಲಾಖೆಗೆ ಬಿಡುಗಡೆಯಾದ ಅನುದಾನದ ಖರ್ಚಿನ ಲೆಕ್ಕ ಕೇಳಿದ ಅಂದಾಜು ಸಮಿತಿ( ಆಗಸ್ಟ್‌ 18)

https://stack.thefile.in/2020/08/legislature/4776/

46. ರ್ಯಾಪಿಡ್‌ ಆಂಟಿಜೆನ್‌ ಕಿಟ್‌ ಪೂರೈಕೆಗೆ ಆದೇಶ ಪಡೆದಿದ್ದ ಕಂಪನಿಗಳು, ನಿಗದಿತ ಅವಧಿಯಲ್ಲಿ ಪೂರೈಕೆ ಮಾಡದ ಕಾರಣ ಆದೇಶ ರದ್ದುಗೊಳಿಸುವುದರಲ್ಲಿಯೂ ನಡೆದಿದ್ದ ಕಮಿಷನ್‌ ವ್ಯವಹಾರವನ್ನೂ ಬಯಲುಗೊಳಿಸಿತ್ತು.

ರ್ಯಾಪಿಡ್‌ ಆಂಟಿಜೆನ್ ಕಿಟ್‌ ಪೂರೈಕೆ ಆದೇಶ ರದ್ದು; ಕಮಿಷನ್‌ ವ್ಯವಹಾರ ಕುದರದಿರುವುದು ಕಾರಣವೇ? (ಆಗಸ್ಟ್‌ 20)

https://stack.thefile.in/2020/08/governance/4793/

47. ವಿಧಾನಸಭೆ ಸಚಿವಾಲಯದ ಅಧೀನದಲ್ಲಿರುವ ವಿಧಾನಸೌಧದ ಕೊಠಡಿಗಳು ಮತ್ತು ಶಾಸಕರ ಭವನದ ಕೊಠಡಿಗಳಿಗೆ ಸ್ಯಾನಿಟೈಸೇಷನ್‌ ಮಾಡಿಸುವ ಸಂಬಂಧ ಆರ್ಥಿಕ ಇಲಾಖೆಗೆ ಬರೆದಿದ್ದ ಪತ್ರವನ್ನು ಆರ್‌ಟಿಐ ಅಡಿ ಒದಗಿಸಲು ಹಿಂದೇಟು ಹಾಕಿತ್ತು.

ಸ್ಯಾನಿಟೈಸೇಷನ್‌; ಆರ್ಥಿಕ ಇಲಾಖೆಗೆ ಬರೆದಿದ್ದ ಪತ್ರ ನೀಡದ ಸಚಿವಾಲಯ, ಪ್ರಸ್ತಾವನೆಯನ್ನು ಕೈಬಿಟ್ಟಿದ್ದೇಕೆ? (ಆಗಸ್ಟ್‌ 20)

https://stack.thefile.in/2020/08/rti/4800/

48. ಹೆಚ್ಚುವರಿ ದರದಲ್ಲಿ ಆಂಟಿಜೆನ್‌ ಕಿಟ್‌ಗಳನ್ನು ಖರೀದಿಸಿದ್ದ ಸರ್ಕಾರ, ಷರತ್ತು ಪೂರೈಸದ ಕಂಪನಿಗಳ ವಿರುದ್ಧ ಕ್ರಮ ಕೈಗೊಳ್ಳುವುದರಲ್ಲಿಯೂ ಪಕ್ಷಪಾತ ಅನುಸರಿಸಿತ್ತು.

ಆಂಟಿಜೆನ್‌ ಕಿಟ್‌ಗೆ ಹೆಚ್ಚುವರಿ ದರ; ಷರತ್ತು ಪೂರೈಸದ ಕಂಪನಿಗಳ ವಿರುದ್ಧ ಕ್ರಮ ಕೈಗೊಳ್ಳಲು ಪಕ್ಷಪಾತ (ಆಗಸ್ಟ್‌ 21)

https://stack.thefile.in/2020/08/governance/4809/

49. ಕೋವಿಡ್‌ ಖರ್ಚಿನ ಮಾಹಿತಿ ಒದಗಿಸಬೇಕಿದ್ದ ಆರೋಗ್ಯ ಇಲಾಖೆ, ನಿಗದಿತ ದಿನಾಂಕದಂದು ನಡೆದಿದ್ದ ಸಭೆಗೆ ಮಾಹಿತಿ ಒದಗಿಸಿರಲಿಲ್ಲ. ಬದಲಿಗೆ ಹೆಚ್ಚುವರಿಯಾಗಿ 15 ದಿನ ಕಾಲಾವಕಾಶ ಕೋರಿತ್ತು.

ಕೋವಿಡ್‌-19; ಖರ್ಚಿನ ಮಾಹಿತಿ ಒದಗಿಸಲು 15 ದಿನ ಕಾಲಾವಕಾಶ ಕೋರಿದ ಆರೋಗ್ಯ ಇಲಾಖೆ (ಆಗಸ್ಟ್‌ 21)

https://stack.thefile.in/2020/08/governance/4815/

50. ಪಿಪಿಇ ಕಿಟ್‌ ಖರೀದಿ ವೇಳೆಯಲ್ಲಿ ಇ-ಪ್ರೊಕ್ಯೂರ್‌ಮೆಂಟ್‌ನಲ್ಲಿ ಟೆಂಡರ್‌ ಕರೆಯದ ಕೆಡಿಎಲ್‌ಡಬ್ಲ್ಯೂಎಸ್‌, ಕೊಟೇಷನ್‌ ಕರೆಯುವ ಮೂಲಕ ಕಮಿಷನ್‌ ವ್ಯವಹಾರ ನಡೆಸಿತ್ತು ಎಂಬ ಆರೋಪ ಕುರಿತೂ ‘ದಿ ಫೈಲ್‌’ ಸಮಗ್ರ ವರದಿ ಪ್ರಕಟಿಸಿತ್ತು.

ಪಿಪಿಇ ಕಿಟ್‌ ಖರೀದಿ; 150 ಕೋಟಿ ಮೊತ್ತಕ್ಕೂ ಟೆಂಡರ್‌ ಕರೆಯದ ಹಿಂದಿನ ಗುಟ್ಟೇನು? (ಆಗಸ್ಟ್‌ 25) ಕ

https://stack.thefile.in/2020/08/governance/4837/

Tags: 50 ಮುಖಗಳುbjpBlack FunguscongressCOVIDD K Shivakumardr k sudhakarH K PatilPACPPE kitsPublic Accounts CommitteeRamalingareddySiddaramaiahaU T KhaderVishweshwar Hegde Kageriಅಧ್ಯಕ್ಷರುಕರೋನಾಕೋವಿಡ್‌ಕೋವಿಡ್‌ ಭ್ರಷ್ಟಾಚಾರಡಿ ಕೆ ಶಿವಕುಮಾರ್ನ್ಯಾಯಾಂಗ ತನಿಖೆಪಿಪಿಇ ಕಿಟ್‌ಯು ಟಿ ಖಾದರ್‌ವಿಚಾರಣೆ ಆಯೋಗವಿಫಳವಿಶ್ವೇಶ್ವರ ಹೆಗಡೆ ಕಾಗೇರಿಸಾರ್ವಜನಿಕ ಲೆಕ್ಕಪತ್ರ ಸಮಿತಿಸಿದ್ದರಾಮಯ್ಯಸ್ಯಾನಿಟೈಸರ್‌ಹೆಚ್‌ ಕೆ ಪಾಟೀಲ್‌ಹೆಚ್‌ ಡಿ ಕುಮಾರಸ್ವಾಮಿ
Advertisement Banner
Previous Post

ಸಚಿವಾಲಯಕ್ಕೆ ಮಾರುಕಟ್ಟೆ ಜಂಟಿ ಆಯುಕ್ತ ಸಿದ್ದೇಶ್ವರ್‌ ವರ್ಗಾವಣೆಗೆ ಸೂಚನೆ; ನಿಯಮ ಉಲ್ಲಂಘಿಸಿದ ಸಿಎಂ

Next Post

ಹುದ್ದೆಗಳನ್ನೇ ಬ್ಲಾಕ್‌ ಮಾಡಿ ತಂತ್ರಾಂಶ ದುರುಪಯೋಗ ಆರೋಪ; ಅಧಿಕಾರಿಗಳ ಸಮಿತಿ ರಚನೆ, ವರದಿಗೆ ಸೂಚನೆ

thefilestack

thefilestack

Next Post

ಹುದ್ದೆಗಳನ್ನೇ ಬ್ಲಾಕ್‌ ಮಾಡಿ ತಂತ್ರಾಂಶ ದುರುಪಯೋಗ ಆರೋಪ; ಅಧಿಕಾರಿಗಳ ಸಮಿತಿ ರಚನೆ, ವರದಿಗೆ ಸೂಚನೆ

Recommended

ಆಗ ವಿಜಯೇಂದ್ರ, ಈಗ ಯತೀಂದ್ರ; ಸಿಎಂ ಸಚಿವಾಲಯದ ಗುತ್ತಿಗೆ ನೌಕರರಲ್ಲಿ ವರುಣಾ ಕ್ಷೇತ್ರದವರ ಸಿಂಹಪಾಲು

3 years ago

ಜನಪ್ರಿಯ ಯೋಜನೆಗಳ ಅನುಷ್ಠಾನ; ಅತ್ಯಧಿಕ ರಾಜಸ್ವ ಸಂಗ್ರಹಣೆಗೆ ಗುರಿ ನಿಗದಿ, ಆನ್‌ಲೈನ್‌ ಮದ್ಯ ಮಾರಾಟ!

2 years ago

Don't Miss

ಕಾಂಗ್ರೆಸ್‌ ಸರ್ಕಾರದಿಂದ ‘ಕಾಂಗ್ರೆಸ್‌ ಭವನ ಟ್ರಸ್ಟ್‌’ಗೆ ಸರ್ಕಾರಿ ಜಾಗ; ಹಿತಾಸಕ್ತಿ ಸಂಘ‍ರ್ಷದ ಸುಳಿಯಲ್ಲಿ ಸಿಎಂ, ಡಿಸಿಎಂ

August 18, 2025

70 ಹುದ್ದೆಗಳಿಗೆ ನೇಮಕ; ಆದೇಶ ನೇರಾನೇರ ಉಲ್ಲಂಘನೆ, ರಾಜ್ಯಪಾಲರ ಕಚೇರಿಯ ಜಾಣ ಕುರುಡು ಬಯಲು

August 18, 2025

ಗೃಹಲಕ್ಷ್ಮಿ ವೆಚ್ಚಕ್ಕೂ ಜಿಎಸ್‌ಟಿ ಕೊಡುಗೆಗೂ ಅಜಗಜಾಂತರ; ಹಣಕಾಸು ಹೊಣೆಗಾರಿಕೆ ಸೃಷ್ಟಿಸಿತೇ?

August 16, 2025

ಕಲ್ಯಾಣ ಕರ್ನಾಟಕದಲ್ಲಿ ಪಿಡಬ್ಲ್ಯೂಡಿ ಇಲಾಖೆಯ ಆರು ಅಧಿಕಾರಿಗಳ ಮೇಲೆ ಲೋಕಾಯುಕ್ತ ದಾಳಿ; ಮೂವರು ಮಾತ್ರ ಅಮಾನತು

August 14, 2025
the file

THE FILE is run by the File Stack Media Private Limited. It is founded and edited by G Mahantesh, a veteran investigative journalist who has worked in the past for mainstream news television, broadsheet newspapers and digital ventures.

Follow us

Recent News

ಕಾಂಗ್ರೆಸ್‌ ಸರ್ಕಾರದಿಂದ ‘ಕಾಂಗ್ರೆಸ್‌ ಭವನ ಟ್ರಸ್ಟ್‌’ಗೆ ಸರ್ಕಾರಿ ಜಾಗ; ಹಿತಾಸಕ್ತಿ ಸಂಘ‍ರ್ಷದ ಸುಳಿಯಲ್ಲಿ ಸಿಎಂ, ಡಿಸಿಎಂ

August 18, 2025

70 ಹುದ್ದೆಗಳಿಗೆ ನೇಮಕ; ಆದೇಶ ನೇರಾನೇರ ಉಲ್ಲಂಘನೆ, ರಾಜ್ಯಪಾಲರ ಕಚೇರಿಯ ಜಾಣ ಕುರುಡು ಬಯಲು

August 18, 2025

Categories

  • Blog
Support Us
  • About
  • Advertise
  • Privacy & Policy
  • Contact

© THE FILE 2026 All Rights Reserved by File Stack Media Private Limited. Designed by Kalahamsa infotech Pvt.Ltd

No Result
View All Result
  • Home
  • CBI/CID
  • RTI
  • GOVERNANCE
  • IT/ED
  • LEGISLATURE
  • LOKAYUKTA
  • About Us
  • Contact Us
  • Kannada Version

© THE FILE 2026 All Rights Reserved by File Stack Media Private Limited. Designed by Kalahamsa infotech Pvt.Ltd