ಬೆಂಗಳೂರು; ಲೋಕಾಯುಕ್ತ ಹೆಸರಿನಲ್ಲಿ ಸರ್ಕಾರಿ ಅಧಿಕಾರಿಗಳಿಂದ ಹಣ ಸುಲಿಗೆ ಮಾಡುತ್ತಿದ್ದ ಪ್ರಕರಣದ ಆರೋಪಿಗಳೊಂದಿಗೆ ಅಬಕಾರಿ ಸಚಿವ ಆರ್ ಬಿ ತಿಮ್ಮಾಪುರ ಅವರು ಸಂಪರ್ಕದಲ್ಲಿದ್ದರು ಮತ್ತು ಆರೋಪಿಗಳನ್ನು ಭೇಟಿ ಮಾಡಿದ್ದರು ಎಂಬ ಸಂಗತಿಯನ್ನು ಲೋಕಾಯುಕ್ತ ಸಂಸ್ಥೆಯು ಮುಚ್ಚಿಡುತ್ತಿದೆ!
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರಕ್ಕೆ ಲೋಕಾಯುಕ್ತ ರಿಜಿಸ್ಟ್ರಾರ್ ಅವರು ಬರೆದಿರುವ ಪತ್ರ ಮತ್ತು ಬಿಡುಗಡೆ ಮಾಡಿರುವ ಎರಡು ಪತ್ರಿಕಾ ಹೇಳಿಕೆಗಳಲ್ಲಿಯೂ ಅಬಕಾರಿ ಸಚಿವ ಆರ್ ಬಿ ತಿಮ್ಮಾಪುರ ಅವರ ಹೆಸರಿಲ್ಲ. ಸಚಿವ ತಿಮ್ಮಾಪುರ ಅವರ ಹೆಸರನ್ನು ಗೌಪ್ಯವಾಗಿಡುತ್ತಿರುವ ಲೋಕಾಯುಕ್ತದ ಈ ನಡೆಯು ಹಲವು ಅನುಮಾನಗಳಿಗೆ ದಾರಿಮಾಡಿಕೊಟ್ಟಿದೆ.
ಲೋಕಾಯುಕ್ತ ಹೆಸರು ಹೇಳಿ ಹಣ ವಸೂಲಿ ಮಾಡುತ್ತಿದ್ದ ಎಂಬ ಆರೋಪದ ಮೇರೆಗೆ ಬಂಧಿತನಾಗಿರುವ ಆರೋಪಿ ನಿಂಗಪ್ಪನ ಪ್ರಕರಣವು ಅಧಿಕಾರಿಗಳ ವರ್ಗದಲ್ಲಿ ಭಾರೀ ಸಂಚಲನ ಮೂಡಿಸಿತ್ತು. ಆರೋಪಿ ನಿಂಗಪ್ಪ, ಲೋಕಾಯುಕ್ತ ಎಸ್ ಪಿ ಶ್ರೀನಾಥ್ ಜೋಷಿ ಅವರನ್ನು ಬೆಂಗಳೂರಿನ ಐಷಾರಾಮಿ ಹೋಟೆಲ್‌ವೊಂದರಲ್ಲಿ ಅಬಕಾರಿ ಸಚಿವ ಆರ್ ಬಿ ತಿಮ್ಮಾಪುರ ಅವರನ್ನು ಭೇಟಿ ಮಾಡಿಸಿದ್ದ.
ಎಸ್ಪಿ ಶ್ರೀನಾಥ್ ಜೋಷಿ ಅವರನ್ನು ಸಚಿವ ತಿಮ್ಮಾಪುರ ಅವರನ್ನು ಭೇಟಿ ಮಾಡಿಸಲಾಗಿತ್ತು ಎಂಬ ಸಂಗತಿಯನ್ನು ಆರೋಪಿ ನಿಂಗಪ್ಪ ಬಾಯಿಬಿಟ್ಟಿದ್ದ. ಏಪ್ರಿಲ್ ಮೊದಲನೇ ವಾರದಲ್ಲಿ ಶ್ರೀನಾಥ್ ಜೋಷಿ ಅವರನ್ನು ಅಬಕಾರಿ ಸಚಿವ ಆರ್ ಬಿ ತಿಮ್ಮಾಪುರ ಅವರನ್ನು ವರ್ಗಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಭೇಟಿಯಾಗಿದ್ದರು. ಮತ್ತು ನೇರವಾಗಿ ಅಬಕಾರಿ ಸಚಿವ ಆರ್ ಬಿ ತಿಮ್ಮಾಪುರ ಅವರ ಹೆಸರನ್ನೂ ಹೇಳಿದ್ದ. ಆರೋಪಿ ನಿಂಗಪ್ಪನಿಗೆ ಅಬಕಾರಿ ಸಚಿವ ಆರ್ ಬಿ ತಿಮ್ಮಾಪುರ ಅವರ ಆಪ್ತ ಸಹಾಯಕ ಎಂದು ಹೇಳಲಾಗಿರುವ ರಮೇಶ್ ಎಂಬಾತನೂ ಪರಿಚಯವಿದ್ದ ಎಂದೂ ಮಾಹಿತಿ ನೀಡಿದ್ದ.
https://stack.thefile.in/2025/06/lokayukta/32639/
ಸಚಿವ ಆರ್ ಬಿ ತಿಮ್ಮಾಪುರ ಅವರ ಹೆಸರನ್ನು ಆರೋಪಿ ನೇರವಾಗಿ ತಿಳಿಸಿದ್ದರೂ ಸಹ ಲೋಕಾಯುಕ್ತ ರಿಜಿಸ್ಟ್ರಾರ್ ಅವರು ಸರ್ಕಾರಕ್ಕೆ ಬರೆದಿರುವ ಪತ್ರದಲ್ಲಿ ಹೆಸರಿಸಿಲ್ಲ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಡುಗಡೆ ಮಾಡಿರುವ ಎರಡು ಪತ್ರಿಕಾ ಹೇಳಿಕೆಗಳಲ್ಲೂ ಸಚಿವ ತಿಮ್ಮಾಪುರ ಅವರ ಹೆಸರನ್ನು ಹೇಳಿಲ್ಲ.
ಲೋಕಾಯುಕ್ತ ಪೊಲೀಸ್ ವಿಭಾಗವು 2025ರ ಜೂನ್ಬಿ 17ರಂದು ಮೊದಲ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿತ್ತು. ಆರೋಪಿಯು ಕ್ರಿಪ್ಟೋ ಕರೆನ್ಸಿಯಲ್ಲಿ ಹೂಡಿಕೆ ಮಾಡಿದ್ದಾನೆ ಎಂದು ಅಧಿಕೃತವಾಗಿ ಹೇಳಿತ್ತು. ಮತ್ತು ಲೋಕಾಯುಕ್ತ ಹೆಸರಿನಲ್ಲಿ ರಾಜ್ಯದ ವಿವಿಧೆಡೆ ಹಲವು ಖಾಸಗಿ ವ್ಯಕ್ತಿಗಳು ಹಣ ವಸೂಲಿ ಮಾಡಿದ್ದಾರೆ ಎಂದು ಪ್ರಕರಣಗಳ ಸಂಖ್ಯೆ ಸಮೇತ ವಿವರಿಸಲಾಗಿತ್ತು.

ಈ ಹೇಳಿಕೆ ಬಿಡುಗಡೆ ಮಾಡುವ ಹೊತ್ತಿಗೆ ಆರೋಪಿ ನಿಂಗಪ್ಪ, ತನಿಖಾಧಿಕಾರಿ ಮುಂದೆ ಸಚಿವ ಆರ್ ಬಿ ತಿಮ್ಮಾಪುರ ಅವರ ಹೆಸರನ್ನು ಬಾಯಿಬಿಟ್ಟಿದ್ದ. ಆದರೂ ಮೊದಲ ಪತ್ರಿಕಾ ಹೇಳಿಕೆಯಲ್ಲಿ ಈ ಸಂಗತಿಯನ್ನು ಉಲ್ಲೇಖಿಸಿಲ್ಲ.
ಈ ಹೇಳಿಕೆ ಬಿಡುಗಡೆ ಮಾಡಿದ 7 ದಿನದೊಳಗೇ ಲೋಕಾಯುಕ್ತ ರಿಜಿಸ್ಟ್ರಾರ್ ಚಂದ್ರಶೇಖರ ರೆಡ್ಡಿ ಅವರು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಅರೆ ಸರ್ಕಾರಿ ಪತ್ರ ಬರೆದಿದ್ದರು.
ಆರೋಪಿ ನಿಂಗಪ್ಪನೊಂದಿಗೆ ಲೋಕಾಯುಕ್ತ ಎಸ್ಪಿ ಶ್ರೀನಾಥ್ ಜೋಷಿ ಅವರು ಅಪರಾಧಿಕ ಒಳ ಸಂಚು ನಡೆಸಿ ಹಣ ವಸೂಲಿ ಮಾಡಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ ಶಾಲಿನಿ ರಜನೀಶ್ ಅವರಿಗೆ ಲೋಕಾಯುಕ್ತ ರಿಜಿಸ್ಟ್ರಾರ್ ಚಂದ್ರಶೇಖರ ರೆಡ್ಡಿ ಅವರು 2025ರ ಜೂನ್ 23ರಂದು 2 ಪುಟಗಳ ಪತ್ರದಲ್ಲಿ (ಸಂಖ್ಯೆ; ಲೋಕ್/ಆಡಳಿತ-1/17/2025-26) ವಿವರಿಸಿದ್ದರು.
ರಿಜಿಸ್ಟ್ರಾರ್ ಬರೆದಿರುವ ಪತ್ರದಲ್ಲೇನಿತ್ತು?
ಸರ್ಕಾರಿ ಅಧಿಕಾರಿಗಳೊಂದಿಗೆ ಹಣ ವಸೂಲಿ ಮಾಡಿರುವ ಪ್ರಕರಣದಲ್ಲಿ ಎಸ್ಪಿ ಶ್ರೀನಾಥ್ ಜೋಷಿ ಅವರು ಆರೋಪಿ ನಿಂಗಪ್ಪನೊಂದಿಗೆ ಭಾಗಿಯಾಗಿದ್ದಾರೆ ಎಂದು ಲೋಕಾಯುಕ್ತ ಪೊಲೀಸರು ಪ್ರಾಥಮಿಕ ವಿಚಾರಣೆಯಲ್ಲಿ ದೃಢಪಡಿಸಿರುವುದನ್ನು ರಿಜಿಸ್ಟ್ರಾರ್ ಅವರು ಸರ್ಕಾರಕ್ಕೆ ಖಚಿತಪಡಿಸಿದ್ದರು.
ಅಲ್ಲದೇ ಇದೇ ಪ್ರಕರಣದಲ್ಲಿ ಎಸ್ಪಿ ಶ್ರೀನಾಥ್ ಜೋಷಿ ಅವರ ವಿರುದ್ಧ ನಿಯಮಾನುಸಾರ ಸೂಕ್ತ ಕ್ರಮ ಜರುಗಿಸಬೇಕು ಎಂದು ರಿಜಿಸ್ಟ್ರಾರ್ ಅವರು ಸರ್ಕಾರಕ್ಕೆ ಶಿಫಾರಸ್ಸು ಮಾಡಿದ್ದರು.
'ಲೋಕಾಯುಕ್ತವರಿಂದ ನಿರ್ದೇಶಿಸಲ್ಪಟ್ಟಿರುವ ಪ್ರಕಾರ ಕರ್ನಾಟಕ ಲೋಕಾಯುಕ್ತ ಬೆಂಗಳೂರು ನಗರ ವಿಭಾಗ 1ರಲ್ಲಿ ಪೊಲೀಸ್ ಅಧೀಕ್ಷಕರ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಶ್ರೀನಾಥ ಜೋಷಿ ಅವರು ಅಖಿಲ ಭಾರತ ಸೇವೆಗಳ ನಿಯಮಗಳು 1968ರ ನಿಯಮಗಳನ್ನು ಉಲ್ಲಂಘಿಸಿರುವುದು ಕಂಡು ಬಂದಿದೆ. ಇವರ ವಿರುದ್ಧ ನಿಯಮಾನುಸಾರ ಸೂಕ್ತ ಕ್ರಮಗಳನ್ನು ಜರುಗಿಸಬೇಕು. ಹಾಗೂ ಜರುಗಿಸಿದ ಕ್ರಮಗಳ ಬಗ್ಗೆ ಈ ಕಚೇರಿಗೆ ಅಗತ್ಯ ಮಾಹಿತಿಗಳನ್ನು ಒದಗಿಸಬೇಕು,' ಎಂದು ರಿಜಿಸ್ಟ್ರಾರ್ ಚಂದ್ರಶೇಖರ್ ರೆಡ್ಡಿ ಅವರು ಕೋರಿದ್ದರು.
ಈ ಪತ್ರ ಆಧರಿಸಿ 'ದಿ ಫೈಲ್', ವರದಿ ಪ್ರಕಟಿಸಿತ್ತು.
https://stack.thefile.in/2025/07/lokayukta/32917/
'ದಿ ಫೈಲ್', ವರದಿ ಪ್ರಕಟಿಸುತ್ತಿದ್ದಂತೆ ಲೋಕಾಯುಕ್ತ ಸಂಸ್ಥೆಯು 2025ರ ಜುಲೈ 2ರಂದು ಮತ್ತೊಂದು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದೆ.

ಶ್ರೀನಾಥ್ ಜೋಷಿ ಅವರ ವಿರುದ್ಧ ಅಖಿಲ ಭಾರತ ಸೇವೆಗಳ ನಿಯಮಗಳ ಆಧರಿಸಿ ಸೂಕ್ತ ಕ್ರಮ ಜರುಗಿಸಬೇಕು ಎಂದು ಶಿಫಾರಸ್ಸು ಮಾಡಲಾಗಿದೆ ಎಂದು ಅರೆ ಸರ್ಕಾರಿ ಪತ್ರದಲ್ಲಿನ ಅಂಶಗಳನ್ನು ಪತ್ರಿಕಾ ಹೇಳಿಕೆಯಲ್ಲಿ ವಿವರಿಸಿದೆ.

ಅಲ್ಲದೇ ಲೋಕಾಯುಕ್ತ, ಉಪ ಲೋಕಾಯುಕ್ತರು ನಡೆಸಿದ್ದ ದಾಳಿಗಳ ವಿವರಗಳು, ಲೋಕಾಯುಕ್ತ ಸಂಸ್ಥೆಯಲ್ಲಿನ ಖಾಲಿ ಹುದ್ದೆಗಳ ವಿವರಗಳು, ಸರ್ಕಾರದ ಮುಂದಿರುವ ಪ್ರಸ್ತಾವನೆಗಳು, ಬಾಕಿ ಇರುವ ಪ್ರಕರಣಗಳ ವಿವರಗಳನ್ನಷ್ಟೇ ಹೇಳಿಕೆಯಲ್ಲಿ ತಿಳಿಸಿದೆ.

ವಿಶೇಷವೆಂದರೇ ಎರಡನೇ ಹೇಳಿಕೆಯಲ್ಲಿ ಅಪ್ಪಿ ತಪ್ಪಿಯೂ ಸಚಿವ ತಿಮ್ಮಾಪುರ ಅವರ ಹೆಸರನ್ನು ಹೇಳಿಲ್ಲ. ಲೋಕಾಯುಕ್ತದ ಈ ನಡೆಯು, ಸಚಿವ ತಿಮ್ಮಾಪುರ ಅವರನ್ನು ರಕ್ಷಣೆ ಮಾಡಲಾಗುತ್ತಿದೆಯೇ ಎಂಬ ಅನುಮಾನಗಳಿಗೂ ಕಾರಣವಾಗಿದೆ.
‘ಸದ್ಯದ ಹಗರಣದಲ್ಲಿ ನಿಂಗಪ್ಪ ಮತ್ತು ಶ್ರೀನಾಥ ಜೋಷಿ, ಹಾಲಿ ಅಬಕಾರಿ ಸಚಿವ ತಿಮ್ಮಾಪುರ ಅವರ ಜತೆ ನೇರ ಸಂಪರ್ಕದಲ್ಲಿದ್ದರು ಎಂದು ತನಿಖೆಯಿಂದ ಖಾತ್ರಿಯಾಗಿದೆ. ಆದರೆ ಎಲ್ಲಿಯೂ ಅಧಿಕೃತವಾಗಿ ಹೇಳದೇ ಇಡೀ ಹಗರಣವನ್ನು ಮುಚ್ಚಿ ಹಾಕುವ ಕೆಲಸ ಲೋಕಾಯುಕ್ತದಲ್ಲಿ ನಡೆಯುತ್ತಿದೆ. ಸಚಿವ ತಿಮ್ಮಾಪುರ ಮತ್ತು ಭ್ರಷ್ಟ ಲೋಕಾಯುಕ್ತ ಅಧಿಕಾರಿಗಳನ್ನು ರಕ್ಷಿಸಲು ಸ್ವತಃ ಹಾಲಿ ಲೋಕಾಯುಕ್ತರಾದ ಬಿ ಎಸ್ ಪಾಟೀಲರೇ ಆಸಕ್ತಿ ವಹಿಸಿದ್ದಾರೆ ಎಂದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಹಾಲಿ ತನಿಖೆಯ ಎಲ್ಲಾ ಮಾಹಿತಿಗಳನ್ನು ಸಾರ್ವಜನಿಕವಾಗಿ ಬಹಿರಂಗಗೊಳಿಸಬೇಕು,’ ಎನ್ನುತ್ತಾರೆ ಕರ್ನಾಟಕ ರಾಷ್ಟ್ರಸಮಿತಿಯ ರಾಜ್ಯಾಧ್ಯಕ್ಷ ರವಿಕೃಷ್ಣಾ ರೆಡ್ಡಿ.
https://stack.thefile.in/2025/06/lokayukta/32776/
ಹಣ ಸುಲಿಗೆ ಸಂಬಂಧ ಲೋಕಾಯುಕ್ತ ಪೊಲೀಸರು ಸೂಕ್ತ ಪುರಾವೆ, ಸಾಕ್ಷ್ಯಗಳನ್ನು ಪತ್ತೆ ಹಚ್ಚಿದ್ದರೂ ಸಹ ಶ್ರೀನಾಥ್ ಜೋಷಿ ಅವರನ್ನು ಅಮಾನತುಗೊಳಿಸಲು ಶಿಫಾರಸ್ಸು ಮಾಡಿರಲಿಲ್ಲ.
https://stack.thefile.in/2025/06/lokayukta/32766/
ಲೋಕಾ ಹೆಸರಿನಲ್ಲಿ ವಸೂಲಿ ಮಾಡಿದ್ದ ಹಣವನ್ನು ಹವಾಲಾ ರೂಪದಲ್ಲಿ ಪರಿವರ್ತಿಸಲಾಗಿತ್ತು. ಮತ್ತು ಆರೋಪಿ ನಿಂಗಪ್ಪ, ಕಾಂಗ್ರೆಸ್ ಪಕ್ಷದ ಸಂಘಟನೆಯಲ್ಲಿದ್ದ ಎಂಬ ಸಂಗತಿಯು ಸಹ ಬಹಿರಂಗವಾಗಿತ್ತು.
https://stack.thefile.in/2025/06/lokayukta/32652/
ಆರೋಪಿ ನಿಂಗಪ್ಪನಿಗೆ ಕಪ್ಪ ಕೊಟ್ಟಿರುವ ಅಬಕಾರಿ ಅಧಿಕಾರಿಗಳ ಪೈಕಿ ಒಬ್ಬ ಅಧಿಕಾರಿ ಮೈಸೂರಿನ ಸಚಿವರೊಂದಿಗೆ ನಿಕಟ ಸಂಪರ್ಕವಿಟ್ಟುಕೊಂಡಿದ್ದ. ಮತ್ತು ಮುಖ್ಯಮಂತ್ರಿಗಳ ಸಲಹೆಗಾರರೊಬ್ಬರೊಂದಿಗೆ ಮತ್ತೊಬ್ಬ ಅಧಿಕಾರಿಯ ಸಂಬಂಧವಿದೆ ಎಂದು ಹೇಳಲಾಗಿತ್ತು.
https://stack.thefile.in/2025/06/lokayukta/32720/
ಲೋಕಾಯುಕ್ತರು, ಉಪ ಲೋಕಾಯುಕ್ತರು ದಾಳಿ ನಡೆಸಿ ಸ್ವಯಂ ಪ್ರೇರಿತವಾಗಿ ದಾಖಲಿಸುತ್ತಿದ್ದ ಪ್ರಕರಣಗಳೇ ಆರೋಪಿ ನಿಂಗಪ್ಪನಿಗೆ ಹಣ ವಸೂಲಿಗೆ ಮೂಲವಾಗಿದ್ದವು.
https://stack.thefile.in/2025/06/lokayukta/32708/
ಹಾಗೆಯೇ ಅಬಕಾರಿ ಇಲಾಖೆ ಅಧಿಕಾರಿಗಳಿಗೆ ತಿಂಗಳಿಗೆ 3 ಲಕ್ಷ ರು. ಹಣಕ್ಕಾಗಿ ಬೇಡಿಕೆ ಇರಿಸಿದ್ದ. 3 ಲಕ್ಷವನ್ನು 3 ಕೆ ಜಿ ರೈಸ್ ಎಂಬುದಾಗಿ ಕೋಡ್ ವರ್ಡ್ ಬಳಸಿದ್ದ. ಮತ್ತು ಆರೋಪಿ ನಿಂಗಪ್ಪನಿಗೆ ಲಕ್ಷಾಂತರ ರುಪಾಯಿಗಳನ್ನು ನೀಡಿದ್ದ ಅಬಕಾರಿ ಇಲಾಖೆಯ ಕೆಲವು ಆಯುಕ್ತರ ಹೆಸರುಗಳನ್ನೂ 'ದಿ ಫೈಲ್', ಹೊರಗೆಡವಿತ್ತು.
https://stack.thefile.in/2025/06/lokayukta/32665/
ಲೋಕಾಯುಕ್ತ ಹೆಸರು ಹೇಳಿ ಹಣ ವಸೂಲಿ ಮಾಡುತ್ತಿದ್ದ ಎಂಬ ಆರೋಪದ ಮೇರೆಗೆ ಬಂಧಿತನಾಗಿರುವ ಆರೋಪಿ ನಿಂಗಪ್ಪನ ಪ್ರಕರಣವು ಅಧಿಕಾರಿಗಳ ವರ್ಗದಲ್ಲಿ ಭಾರೀ ಸಂಚಲನ ಮೂಡಿಸಿರುವ ಹೊತ್ತಿನಲ್ಲೇ ಇದೀಗ ನೇರವಾಗಿ ಅಬಕಾರಿ ಸಚಿವ ಆರ್ ಬಿ ತಿಮ್ಮಾಪುರ ಅವರ ಹೆಸರು ತಳಕು ಹಾಕಿಕೊಂಡಿತ್ತು.
https://stack.thefile.in/2025/06/lokayukta/32684/
ಅಲ್ಲದೇ ಆರೋಪಿ ನಿಂಗಪ್ಪ ಎಂಬಾತನು 6 ತಿಂಗಳಿನಿಂದಲೂ ಅಧಿಕಾರಿಗಳಿಂದ ವಸೂಲಿ ಮಾಡಿದ್ದ ಹಣವನ್ನು ಕ್ರಿಪ್ಟೋ ಕರೆನ್ಸಿಯಲ್ಲಿಯೂ ಹೂಡಿಕೆ ಮಾಡಿದ್ದ ಎಂದು 'ದಿ ಫೈಲ್', ವರದಿ ಪ್ರಕಟಿಸಿತ್ತು. ಈ ವರದಿಯು ಅಧಿಕಾರಿ ವರ್ಗದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಲೋಕಾಯುಕ್ತ ಸಂಸ್ಥೆಯು ಬಿಡುಗಡೆ ಮಾಡಿದ್ದ ಹೇಳಿಕೆಯಲ್ಲಿಯೂ ಈ ಅಂಶವಿತ್ತು.
https://stack.thefile.in/2025/06/lokayukta/32614/
ಈ ಪ್ರಕರಣದಲ್ಲಿ ಮೂವರು ಸಚಿವರ ಆಪ್ತ ಕಾರ್ಯದರ್ಶಿಗಳ ಹೆಸರೂ ಸಹ ತಳಕು ಹಾಕಿಕೊಂಡಿತ್ತು.
https://stack.thefile.in/2025/06/lokayukta/32540/
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ಎಸ್ಪಿ ಶ್ರೀನಾಥ ಜೋಷಿ ಅವರ ಮನೆಯನ್ನು ಶೋಧಿಸಿದ್ದರು.
https://stack.thefile.in/2025/06/lokayukta/32572/
ವಿಶೇಷವೆಂದರೇ ಸಿದ್ದರಾಮಯ್ಯ ಅವರು ಮೊದಲ ಅವಧಿಯಲ್ಲಿ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿಯೂ ಲೋಕಾಯುಕ್ತರಾಗಿದ್ದ ಭಾಸ್ಕರರಾವ್ ಅವರ ಪುತ್ರ ಮತ್ತು ಲೋಕಾಯುಕ್ತ ಸಂಸ್ಥೆಯ ಅಧಿಕಾರಿಗಳು ಹಲವರಿಂದ ಹಣಕ್ಕಾಗಿ ಬೇಡಿಕೆ ಇರಿಸಿದ್ದರು. ಆ ಸಂದರ್ಭದಲ್ಲಿ ಲೋಕಾಯುಕ್ತ ಎಸ್ಪಿಯಾಗಿದ್ದ ಸೋನಿಯಾ ನಾರಂಗ್ ಅವರು ಈ ಪ್ರಕರಣವನ್ನು ಬಹಿರಂಗಪಡಿಸಿದ್ದರು. ಅಲ್ಲದೇ ಲೋಕಾಯುಕ್ತ ಹುದ್ದೆಗೆ ಭಾಸ್ಕರರಾವ್ ಅವರು ರಾಜೀನಾಮೆ ನೀಡಿದ್ದರು. ಹಾಗೂ ಅವರ ಪುತ್ರ ಅಶ್ವಿನ್ ರಾವ್ ಸಹ ಪೊಲೀಸರ ಬಂಧನಕ್ಕೆ ಒಳಗಾಗಿದ್ದ.
ಈ ಪ್ರಕರಣದ ನಂತರ ಲೋಕಾಯುಕ್ತಕ್ಕಿದ್ದ ಪೊಲೀಸ್ ಅಧಿಕಾರವನ್ನು ಮೊಟಕುಗೊಳಿಸಿ, ಭ್ರಷ್ಟಾಚಾರ ನಿಗ್ರಹ ದಳವನ್ನು ಸ್ಥಾಪಿಸಲಾಗಿತ್ತು. ಆ ನಂತರ ಎಸಿಬಿಯನ್ನೂ ರದ್ದುಗೊಳಿಸಿ ಲೋಕಾಯುಕ್ತ ಸಂಸ್ಥೆಗೆ ಪುನಃ ಪೊಲೀಸ್ ಅಧಿಕಾರವನ್ನು ಮರು ಸ್ಥಾಪಿಸಲಾಗಿತ್ತು. ಸಿದ್ದರಾಮಯ್ಯ ಅವರು ಎರಡನೇ ಬಾರಿ ಮುಖ್ಯಮಂತ್ರಿಯಾಗಿ ಎರಡು ವರ್ಷ ಪೂರ್ಣಗೊಳಿಸಿರುವ ಹೊತ್ತಿನಲ್ಲೇ ಲೋಕಾಯುಕ್ತ ಹೆಸರಿನಲ್ಲಿ ನಿಂಗಪ್ಪ ಎಂಬಾತ ಹಣ ವಸೂಲಿ ಮಾಡಿರುವ ಪ್ರಕರಣವು ಮುನ್ನೆಲೆಗೆ ಬಂದಿದೆ. ಅಲ್ಲದೇ ಲೋಕಾಯುಕ್ತ ಸಂಸ್ಥೆಯ ವಿಶ್ವಾಸಾರ್ಹತೆಯ ಪ್ರಶ್ನೆಯೂ ಎದುರಾಗಿದೆ.




