the file
No Result
View All Result
Subscribe to get Updates
  • Home
  • CBI/CID
  • RTI
  • GOVERNANCE
  • IT/ED
  • LEGISLATURE
  • LOKAYUKTA
  • About Us
  • Contact Us
  • Kannada Version
  • Home
  • CBI/CID
  • RTI
  • GOVERNANCE
  • IT/ED
  • LEGISLATURE
  • LOKAYUKTA
  • About Us
  • Contact Us
  • Kannada Version
The File
No Result
View All Result
Home GOVERNANCE

ಕಾಂಗ್ರೆಸ್‌ ಭವನ ಟ್ರಸ್ಟ್‌ಗೆ ಚಿಲ್ಲರೆ ದರದಲ್ಲಿ 2 ಎಕರೆ ಜಮೀನು; ಹರಾಜು ನಡೆಸದೇ ಮಂಜೂರು, ನಿಯಮ ಉಲ್ಲಂಘನೆ

thefilestack by thefilestack
August 12, 2025
in GOVERNANCE
0
0
SHARES
0
VIEWS
Share on FacebookShare on Twitter

ಬೆಂಗಳೂರು;  ನಗರ ಸ್ಥಳೀಯ ಸಂಸ್ಥೆಗಳಿಗೆ ಸೇರಿದ ಜಾಗವನ್ನು ಸಾರ್ವಜನಿಕ ಹರಾಜು ಪ್ರಕ್ರಿಯೆಯ ಮೂಲಕವೇ ವಿಲೇ ಮಾಡಬೇಕು ಎಂದು 2003ರಲ್ಲಿಯೇ ಸರ್ಕಾರವು ಮಾರ್ಗಸೂಚಿ ಹೊರಡಿಸಿದ್ದರೂ ಸಹ ಅದನ್ನು ಬದಿಗೊತ್ತಿರುವ ರಾಜ್ಯ ಕಾಂಗ್ರೆಸ್‌ ಸರ್ಕಾರ, ʻಕಾಂಗ್ರೆಸ್‌ ಭವನ ಟ್ರಸ್ಟ್‌ʼ ಗೆ ಬಹುಕೋಟಿ ಬೆಲೆಬಾಳುವ ಎಕರೆಗಟ್ಟಲೇ ಜಾಗವನ್ನು ಚಿಲ್ಲರೆ ದರಕ್ಕೆ ಮಂಜೂರು ಮಾಡುತ್ತಿದೆ.

 

ತುಮಕೂರು ಮಹಾನಗರ ಪಾಲಿಕೆಯ ಸುಪರ್ದಿಯಲ್ಲಿರುವ ಬಹು ಕೋಟಿ ಬೆಲೆಬಾಳುವ ಒಟ್ಟು ಜಮೀನಿನ ಪೈಕಿ 2 ಎಕರೆ ಜಾಗವನ್ನು ಸಾರ್ವಜನಿಕ ಹರಾಜು ನಡೆಸದೇ ನೇರವಾಗಿ ಕಾಂಗ್ರೆಸ್‌ ಭವನ ಟ್ರಸ್ಟ್‌ಗೆ ಮಂಜೂರು ಮಾಡಿ ಆದೇಶ ಹೊರಡಿಸಿದೆ. ಅಲ್ಲದೇ ಈ ಜಾಗವು ವ್ಯಾಜ್ಯದಿಂದ ಕೂಡಿದೆಯಲ್ಲದೇ  ನ್ಯಾಯಾಲಯದಲ್ಲಿ ಅಸಲು ದಾವೆ ಅರ್ಜಿಯ ವಿಚಾರಣೆಯು ಇನ್ನೂ ಇತ್ಯರ್ಥಗೊಂಡಿಲ್ಲ. ಆದರೂ ಸಹ ಕಾಂಗ್ರೆಸ್‌ ಭವನ ಟ್ರಸ್ಟ್‌ಗೆ 2 ಎಕರೆ ಜಮೀನು ಮಂಜೂರು ಮಾಡಲು  ಸಚಿವ ಸಂಪುಟವು  ತೀರ್ಮಾನ ತೆಗೆದುಕೊಂಡಿದೆ.

 

ಈ ಸಂಬಂಧ ನಗರಾಭಿವೃದ್ಧಿ ಇಲಾಖೆಯು 2025ರ ಮೇ 27ರಂದು ಹೊರಡಿಸಿರುವ ಆದೇಶದ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಈ ಹಿಂದಿನ ಬಿಜೆಪಿ ಸರ್ಕಾರ ಕಾನೂನು ಇಲಾಖೆಯ ಅಭಿಪ್ರಾಯವನ್ನು ಕಸದಬುಟ್ಟಿಗೆ ಎಸೆದು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ರಾಷ್ಟ್ರೋತ್ಥಾನ ಪರಿಷತ್‌, ಜನಸೇವಾ ಟ್ರಸ್ಟ್‌ಗೆ ಗೋಮಾಳ ಜಮೀನುಗಳನ್ನು ಮಂಜೂರು ಮಾಡಿತ್ತು. ಪ್ರತಿಪಕ್ಷದಲ್ಲಿದ್ದ ಕಾಂಗ್ರೆಸ್‌, ಇದನ್ನು ಟೀಕಿಸಿತ್ತು. ಆದರೀಗ ಕಾಂಗ್ರೆಸ್‌ ಸರ್ಕಾರವು, ನಿಯಮ, ಮಾರ್ಗಸೂಚಿಗಳನ್ನು ಉಲ್ಲಂಘಿಸಿ ಕಾಂಗ್ರೆಸ್‌ ಭವನ ಟ್ರಸ್ಟ್‌ಗೆ ಜಾಗಗಳನ್ನು ಮಂಜೂರು ಮಾಡುತ್ತಿರುವುದು ಈಗ ಚರ್ಚೆಗೆ ಗ್ರಾಸವಾಗುತ್ತಿದೆ.

 

ಕೆಲವು ಇಲಾಖೆಗಳ ಆಕ್ಷೇಪಣೆಯ ನಡುವೆಯೂ ಸರ್ಕಾರಿ ಜಾಗವನ್ನು ಚಿಲ್ಲರೆ ದರಕ್ಕೆ ಮಂಜೂರು ಮಾಡುತ್ತಿರುವ ಹೊತ್ತಿನಲ್ಲೇ ತುಮಕೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಬಹುಕೋಟಿ ಬೆಲೆಬಾಳುವ ಜಮೀನನ್ನು ಚಿಲ್ಲರೆ ದರಕ್ಕೆ ಮಂಜೂರು ಮಾಡಿರುವುದು ಸಾರ್ವಜನಿಕರ ಟೀಕೆಗೆ ಗುರಿಯಾಗುವ ಸಾಧ್ಯತೆಗಳಿವೆ.

 

ತುಮಕೂರಿನಲ್ಲಿ ಕಾಂಗ್ರೆಸ್‌ ಭವನ ಟ್ರಸ್ಟ್‌ಗೆ ಜಮೀನು ಮಂಜೂರು ಮಾಡಬೇಕು ಎಂದು ಗೃಹ ಸಚಿವ ಡಾ ಜಿ ಪರಮೇಶ್ವರ್‍‌ ಅವರು ನಗರಾಭಿವೃದ್ದಿ ಇಲಾಖೆಗೆ ಪತ್ರ ಬರೆದಿದ್ದರು.  ಈ ಜಮೀನಿಗೆ ಸಂಬಂಧಿಸಿದಂತೆ ತುಮಕೂರು ಮಹಾನಗರಪಾಲಿಕೆಯು ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿತ್ತು. ಈ ಜಮೀನು ವ್ಯಾಜ್ಯದಿಂದ ಕೂಡಿರುವುದರ ಬಗ್ಗೆ ಮತ್ತು ಮಂಜೂರಾತಿಗೆ ಸಂಬಂಧಿಸಿದಂತೆ ಸರ್ಕಾರವು ಈ ಹಿಂದೆ ಹೊರಡಿಸಿದ್ದ ಮಾರ್ಗಸೂಚಿಗಳ ಬಗ್ಗೆ ವರದಿಯಲ್ಲಿ ಗಮನ ಸೆಳೆಯಲಾಗಿತ್ತು. ಆದರೂ ಸರ್ಕಾರ ಇದನ್ನು ಪರಿಗಣಿಸದೇ ಜಮೀನು ಮಂಜೂರು ಮಾಡುವ ತೀರ್ಮಾನ ತೆಗೆದುಕೊಂಡಿರುವುದು ಆದೇಶದಿಂದ ಗೊತ್ತಾಗಿದೆ.

 

 

 

ವ್ಯಾಜ್ಯದ ಜಮೀನಿದು!

 

ತುಮಕೂರು ತಾಲೂಕು ಕಸಬಾ ದಕ್ಷಿಣ ಹೋಬಳಿ ಮರಳೂರು ಗ್ರಾಮದ ಸರ್ವೆ ನಂಬರ್‍‌ 87/1 ಮತ್ತು 82/2ರಲ್ಲಿನ ಒಟ್ಟು 4 ಎಕರೆ ವಿಸ್ತೀರ್ಣದ ಜಮೀನು ಇದಾಗಿದೆ. ಇದನ್ನು 1943ರಲ್ಲಿ For Dumping Street Sweeping Night Soil ಉದ್ದೇಶಕ್ಕೆ ತುಮಕೂರು ಮುನ್ಸಿಪಾಲಿಟಿಗೆ ಭೂ ಸ್ವಾಧೀನವಾಗಿತ್ತು.  ಪಹಣಿಯು ತುಮಕೂರು ಮಹಾನಗರ ಪಾಲಿಕೆಯ ಹೆಸರಿನಲ್ಲಿದೆ. ಪ್ರಸ್ತುತ ಸರ್ವೆ ನಂಬರ್‍‌ 87/2ರಲ್ಲಿನ 2 ಎಕರೆ ವಿಸ್ತೀರ್ಣದ ಜಮೀನು ಮಾಲೀಕತ್ವದ ಬಗ್ಗೆ ಗಂಗಮ್ಮ ಮತ್ತಿತರರು ತುಮಕೂರು ಪಾಲಿಕೆ ವಿರುದ್ಧ 3ನೇ ಹೆಚ್ಚುವರಿ ಸಿವಿಲ್‌ ನ್ಯಾಯಾಲಯದಲ್ಲಿ ಅಸಲು ದಾವೆ (O S 426/2015) (ಎಂ ಎ ಪ್ರಕರಣ ಸಂಖ್ಯೆ 19/2023) ಹೂಡಿದ್ದರು ಎಂದು ವರದಿಯಲ್ಲಿ ವಿವರಿಸಿರುವುದು ತಿಳಿದು ಬಂದಿದೆ.

 

 

ಸರ್ವೆ ನಂಬರ್‍‌ 87/2ರಲ್ಲಿರುವ ಜಮೀನು ತಮ್ಮ ಸ್ವತ್ತು ಎಂದು ಡಿಕ್ಲರೇಷನ್‌ ಮತ್ತು ಬೇರೆ ಯಾರಿಗೂ ಮಂಜೂರು ಮಾಡಬಾರದು ಎಂದು ತಡೆಯಾಜ್ಞೆ ಕೋರಿದ್ದಾರೆ. ಈ ಪ್ರಕರಣದಲ್ಲಿ ತುಮಕೂರು ಮಹಾನಗರಪಾಲಿಕೆಯ ಆಯುಕ್ತರನ್ನು ಪ್ರತಿವಾದಿಯನ್ನಾಗಿಸಿರುವುದು ಮಂಜೂರಾತಿ ಆದೇಶದಿಂದ ತಿಳಿದು ಬಂದಿದೆ.

 

ಇತ್ಯರ್ಥವಾಗದ ಅರ್ಜಿ

 

ಈ ಪ್ರಕರಣದ ದಾವೆದಾರರು ಮೃತರಾಗಿದ್ದಾರೆ. ಪ್ರಸ್ತುತ ದಾವೆದಾರರ ವಾರಸುದಾರರು ನ್ಯಾಯಾಯದಲ್ಲಿ ವಕಾಲತ್ತನ್ನು ದಾಖಲಿಸಿದ್ದಾರೆ.

 

 

 

ಕಾಂಗ್ರೆಸ್‌ ಭವನ ಟ್ರಸ್ಟ್‌ಗೆ 2 ಎಕರೆ ಮಂಜೂರು ಮಾಡುವ ಹೊತ್ತಿನಲ್ಲಿ ಈ ಪ್ರಕರಣವು ವಿಚಾರಣೆ ಹಂತದಲ್ಲಿತ್ತು. ಸದ್ಯ ಈ ಪ್ರಕರಣದ ವಿಚಾರಣೆಯು 2025ರ ಆಗಸ್ಟ್‌ 20ರಂದು ನಿಗದಿಯಾಗಿದೆ. ಇಲ್ಲಿಯವರೆಗೂ ನ್ಯಾಯಾಲಯವು ತಡೆಯಾಜ್ಞೆ ನೀಡಿಲ್ಲ.

 

ಚಿಲ್ಲರೆ ದರಕ್ಕೆ ಮಂಜೂರು

 

ಕಾಂಗ್ರೆಸ್‌ ಭವನ ಟ್ರಸ್ಟ್‌ಗೆ ಮಂಜೂರಾಗಿರುವ ಜಾಗಕ್ಕೆ 2023-24ನೇ ಸಾಲಿನ ಮಾರ್ಗಸೂಚಿ ಮೌಲ್ಯವು ಎಕರೆಗೆ 1.70 ಕೋಟಿ ರು ಇದೆ. 2 ಎಕರೆಗೆ ಮಾರ್ಗಸೂಚಿ ಮೌಲ್ಯದ ಪ್ರಕಾರವೇ 3.4 ಕೋಟಿ ರು ಬೆಲೆಬಾಳಲಿದೆ. ಇನ್ನು ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದನೆ ಪಡೆದಿದ್ದರೇ 2 ಎಕರೆಗೆ (30,000 ಸ್ಕೈಯರ್‍‌ ಫೀಟ್‌) ಮಾರ್ಗಸೂಚಿ ಬೆಲೆಯಂತೆ 2,780 ರು ನಂತೆ ಲೆಕ್ಕ ಹಾಕಿದರೇ ಅಂದಾಜು 12 ಕೋಟಿ ರು ಆಗಲಿದೆ.

 

ಮುಕ್ತ ಮಾರುಕಟ್ಟೆಯಲ್ಲಿರುವ 4,500 ರು ನಂತೆ ಲೆಕ್ಕ ಹಾಕಿದರೇ ಎಕರೆಗೆ 8 ಕೋಟಿ ಆಗಲಿದೆ. ಈ 2 ಎಕರೆ ಜಮೀನು,  16 ಕೋಟಿ ಬೆಲೆಬಾಳಲಿದೆ.

 

 

 

 

ಹೀಗೆ ಬಹುಕೋಟಿಯಷ್ಟು ಬೆಲೆ ಬಾಳುವ ಈ ಜಮೀನನ್ನು ಮಾರ್ಗಸೂಚಿ ಮೌಲ್ಯದ ಕೇವಲ ಶೇ.5ರಷ್ಟು ಅಂದರೇ 90 ಲಕ್ಷ ರು ದರ ವಿಧಿಸಿ ಈಗ ಕಾಂಗ್ರೆಸ್‌ ಪಕ್ಷಕ್ಕೆ ಮಂಜೂರು ಮಾಡಲಾಗಿದೆ. ಸಚಿವ ಸಂಪುಟವು ಕೈಗೊಂಡಿರುವ  ತೀರ್ಮಾನವು  (ಸಂಖ್ಯೆ ಸಿ; 396/2025) ಸರ್ಕಾರದ ಬೊಕ್ಕಸಕ್ಕೆ ಉಂಟಾಗಿರುವ ನಷ್ಟಕ್ಕೆ ಕಾರಣವಾಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.

 

ಟ್ರಸ್ಟ್‌ನ ಕಾರ್ಯಚಟುವಟಿಕೆಗಳಿಗೆ ಮಾತ್ರ ಈ ಜಾಗವನ್ನು ಉಪಯೋಗಿಸಬೇಕು, ಬೇರೆ ಯಾರಿಗೂ ಮಾರಾಟ ಮಾಡುವಂತಿಲ್ಲ, ಗುತ್ತಿಗೆ ನೀಡುವಂತಿಲ್ಲ ಎಂಬ ಷರತ್ತುಗಳನ್ನು ವಿಧಿಸಲಾಗಿದೆ. ಈ ಜಾಗವನ್ನ ಪಡೆದ ಟ್ರಸ್ಟ್‌ ಈ ಷರತ್ತುಗಳನ್ನು ಪಾಲಿಸುವಲ್ಲಿ ವಿಫಲವಾದಲ್ಲಿ ಯಾವುದೇ ಪರಿಹಾರ ನೀಡದೇ ಜಾಗದಲ್ಲಿರುವ ಕಟ್ಟಡಗಳ ಸಹಿತ ವಶಕ್ಕೆ ಪಡೆಯಲು ತುಮಕೂರು ಮಹಾನಗರಪಾಲಿಕೆಯು ಸಂಪೂರ್ಣ ಹಕ್ಕು ಹೊಂದಿದೆ.

 

ಈ ಆದೇಶವು ಹೈಕೋರ್ಟ್‌ನಲ್ಲಿರುವ ರಿಟ್‌ ಅರ್ಜಿ (ಸಂಖ್ಯೆ 34257/2024) ಮತ್ತು ತುಮಕೂರು ಜಿಲ್ಲಾ ನ್ಯಾಯಾಲಯದಲ್ಲಿ ಹೂಡಿರುವ ಅಸಲು ದಾವೆಕ್ಕೆ ನೀಡುವ ಅಂತಿಮ ತೀರ್ಪಿಗೆ ಒಳಪಟ್ಟಿದೆ ಎಂಬ ಷರತ್ತನ್ನು ವಿಧಿಸಿರುವುದು ಆದೇಶದಿಂದ ತಿಳಿದು ಬಂದಿದೆ.

 

 

ಈ ಹಿಂದೆ, ಕಾಂಗ್ರೆಸ್‌ ಪಕ್ಷದ ಕಾರ್ಯಾಲಯಕ್ಕೆ ಗುತ್ತಿಗೆ ಆಧಾರದ ಮೇಲೆ ನಿವೇಶನವನ್ನು ಮಂಜೂರು ಮಾಡಲು ನಿಯಮಗಳಲ್ಲಿ ಅವಕಾಶಗಳಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆಯು ಪ್ರಸ್ತಾವನೆಯನ್ನು ತಿರಸ್ಕರಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

 

https://stack.thefile.in/2025/07/governance/33298/

ಬೆಳಗಾವಿಯಲ್ಲಿನ  ಕಾಂಗ್ರೆಸ್‌ ಅಧಿವೇಶನಕ್ಕೆ ನೂರು ವರ್ಷಗಳಾದ ಹಿನ್ನೆಲೆಯಲ್ಲಿ  ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಪಕ್ಷವು (ಕೆಪಿಸಿಸಿ) ರಾಜ್ಯಾದ್ಯಂತ 100 ಕಾಂಗ್ರೆಸ್‌ ಭವನಗಳನ್ನು ನಿರ್ಮಾಣ ಮಾಡಲು ತೀರ್ಮಾನಿಸಿದೆ. ಕೆಪಿಸಿಸಿ ಅಧ್ಯಕ್ಷ ಹಾಗೂ  ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಈ ಸಂಬಂಧ ಪಕ್ಷಕ್ಕೆ ಗುರಿ ನೀಡಿದ್ದರು.  ಹೀಗಾಗಿ ಎಲ್ಲಾ ಸಚಿವರೂ   ನಗರ ಮತ್ತು ಗ್ರಾಮೀಣ ಸ್ಥಳೀಯ ಸರ್ಕಾರಗಳ ಅಧೀನದಲ್ಲಿರುವ ಮತ್ತು ಅವುಗಳ ಹೆಸರಿನಲ್ಲಿರುವ ಜಮೀನು, ನಿವೇಶನಗಳನ್ನು ಮಂಜೂರು ಮಾಡಿಸಿಕೊಳ್ಳಲು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದರು.

 

https://stack.thefile.in/2025/06/governance/32211/

 

ಈ ಪೈಕಿ ಮುಧೋಳ ತಾಲೂಕಿನ ಇಂಗಳಗಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಝಂಜರಕೊಪ್ಪದ ಸರ್ವೆ ನಂಬರ್‍‌ 145ರಲ್ಲಿನ (ಪ್ಲಾಟ್‌ ನಂ 81) 1077.17 ಚ ಮೀಟರ್‍‌ ಜಾಗವನ್ನು ಕಾಂಗ್ರೆಸ್‌ ಪಕ್ಷದ ಕಾರ್ಯಾಲಯಕ್ಕೆ 30 ವರ್ಷಗಳ ಗುತ್ತಿಗೆ ಆಧಾರದ ಮೇಲೆ ಮಂಜೂರು ಮಾಡಿಸಿಕೊಳ್ಳಲು ಪ್ರಸ್ತಾವಿಸಿತ್ತು.

 

ಬಾಗಲಕೋಟೆ ಜಿಲ್ಲಾ ಪಂಚಾಯ್ತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯು  ಗ್ರಾಮೀಣಾಭಿವೃದ್ಧಿ ಪಂಚಾಯತ್‌ರಾಜ್‌ ಆಯುಕ್ತಾಲಯಕ್ಕೆ ಪ್ರಸ್ತಾವವನ್ನು ಸಲ್ಲಿಸಿದ್ದರು.

 

 

 

 

30 ವರ್ಷಕ್ಕೆ ಗುತ್ತಿಗೆ ಕೋರಿ ಪ್ರಸ್ತಾವದಲ್ಲೇನಿತ್ತು?

 

ಮುಧೋಳ ತಾಲೂಕಿನ ಇಂಗಳಗಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಝಂಜರಕೊಪ್ಪದ ಜಾಗವನ್ನು ಮುಧೋಳ ಬ್ಲಾಕ್‌ ಕಾಂಗ್ರೆಸ್‌ ಪಕ್ಷದ ಕಾರ್ಯಾಲಯಕ್ಕೆ 30 ವರ್ಷಗಳ ಗುತ್ತಿಗೆ ಆಧಾರದ ಮೇಲೆ ಮಂಜೂರು ಮಾಡಬೇಕು ಎಂದು ಬಾಗಲಕೋಟೆ ಜಿಲ್ಲಾ ಪಂಚಾಯ್ತಿಗೆ ಸಲ್ಲಿಸಿದ್ದ  ಪ್ರಸ್ತಾವನೆಯನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆಯು ಪರಿಶೀಲಿಸಿತ್ತು.

 

https://stack.thefile.in/2025/06/governance/32196/

 

ಇಂಗಳಗಿ ಗ್ರಾಮ ಪಂಚಾಯ್ತಿಯ ಝಂಜರಕೊಪ್ಪದ ಸರ್ವೆ ನಂಬರ್‍‌ 145 ಪ್ಲಾಟ್‌ ನಂಬರ್‍‌ 81ರಲ್ಲಿನ 1,077.17 ಚ ಮೀ ವಿಸ್ತೀರ್ಣದ ಜಾಗದಲ್ಲಿ ಕಾಂಗ್ರೆಸ್‌ ಪಕ್ಷದ ಕಾರ್ಯಾಲಯಕ್ಕೆ ಕಟ್ಟಡ ನಿರ್ಮಾಣ ಮಾಡುವ ಉದ್ದೇಶ ಹೊಂದಿದೆ ಎಂದು ಹೇಳಿತ್ತು.  2023-24ನೇ ಸಾಲಿನ ಸ್ಥಿರಾಸ್ತಿಗಳ ಅಂದಾಜು ಸರಾಸರಿ ಮಾರುಕಟ್ಟೆ ಮೌಲ್ಯ ಮಾರ್ಗಸೂಚಿಯ ಪ್ರಕಾರ ವಸತಿ ಉದ್ದೇಶದ ಖಾಲಿ ನಿವೇಶನಕ್ಕೆ ಪ್ರತಿ ಚ ಮೀ ಗೆ 4,000 ರು ಇದೆ ಎಂದು ಲೆಕ್ಕಾಚಾರ ಮಾಡಿತ್ತು.

 

 

 

ಈ ನಿವೇಶನವನ್ನು ಪಂಚಾಯ್ತಿ ವ್ಯಾಪ್ತಿಯ ನಾಗರಿಕ ಸೌಲಭ್ಯಗಳ ಅವಶ್ಯಕತೆಗಳಿಗೆ ಕಾಯ್ದರಿಸಿಕೊಂಡಿದೆ. ಈ ನಿವೇಶನವನ್ನೇ ಕಾಂಗ್ರೆಸ್‌ ಪಕ್ಷದ ಕಾರ್ಯಾಲಯಕ್ಕೆ ನೀಡಲು ಅನುಮೋದನೆ ನೀಡಬೇಕು ಎಂದು ಸಿಇಒ ಅವರು ಪ್ರಸ್ತಾವನೆಯಲ್ಲಿ ಕೋರಿದ್ದರು.

 

30 ವರ್ಷಕ್ಕೆ ಗುತ್ತಿಗೆ ನೀಡಲು ಅವಕಾಶಗಳಿವೆಯೇ?

 

ಜಿಲ್ಲಾ, ತಾಲೂಕು ಮತ್ತು   ಗ್ರಾಮ ಪಂಚಾಯ್ತಿಗಳ ವ್ಯಾಪ್ತಿಯಲ್ಲಿ ಸ್ಥಿರ ಸ್ವತ್ತುಗಳನ್ನು ಗುತ್ತಿಗೆ ನೀಡಲು ಹಿಂದಿನ ಬಿಜೆಪಿ ಸರ್ಕಾರವು 2022ರ ನವೆಂಬರ್‍‌ 23ರಂದು ಮಾರ್ಗಸೂಚಿಗಳನ್ನು ಹೊರಡಿಸಿದೆ.  ಈ ಮಾರ್ಗಸೂಚಿಗಳ ಅನುಗುಣವಾಗಿಯೇ ಸ್ಥಿರ ಸ್ವತ್ತುಗಳನ್ನು ಗುತ್ತಿಗೆ ನೀಡಬೇಕು ಎಂದು ನಿರ್ದೇಶಿಸಿತ್ತು.

 

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಂದ ನಿರ್ವಹಿಸಲಾಗುತ್ತಿರುವ ನೋಂದಾಯಿತ ಸಂಘ ಸಂಸ್ಥೆಗಳು ನಡೆಸುವ ಶಾಲೆಗಳು, ಕಾಲೇಜುಗಳು, ಹಾಸ್ಟೆಲ್‌ಗಳು, ಅನಾಥಾಲಯಗಳು ಮತ್ತು ಸಮುದಾಯ ಭವನಗಳ ನಿರ್ಮಾಣಕ್ಕೆ ಗುತ್ತಿಗೆ ನೀಡಲು ಅವಕಾಶವಿದೆ.

 

ಅದೇ ರೀತಿ ರಾಜ್ಯ ಸರ್ಕಾರದಿಂದ ಅಂಗೀಕೃತವಾದ ಅಥವಾ ಆದಾಯ ತೆರಿಗೆ ಅಧಿನಿಯಮ 1961ರ ಕಲಂ 12 (2) ಅಡಿಯಲ್ಲಿ ನೋಂದಾಯಿಸಲ್ಪಟ್ಟ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡೇತರ ಧರ್ಮಸಂಸ್ಥೆಗಳು ನಡೆಸುತ್ತಿರುವ ಹಾಸ್ಟೆಲ್‌ಗಳು, ಶಾಲಾ ಕಾಲೇಜುಗಳು, ಸ್ತ್ರೀ ಸ್ವೀಕಾರ ಕೇಂದ್ರಗಳು, ಅನಾಥಾಲಯಗಳು, ವಿಕಲಚೇತನರು ಮತ್ತು ಮಾನಸಿಕ ಅಸ್ವಸ್ಥ ನಿಲಯಗಳು, ವೃದ್ಧಾಶ್ರಮಗಳು, ಸಂಕೀರ್ಣಗಳಿಗೆ ಗುತ್ತಿಗೆ ಮಂಜೂರು ಮಾಡಲು ಅವಕಾಶ ಕಲ್ಪಿಸಿದೆ.

 

ಅದೇ ರೀತಿ ಕೇಂದ್ರ, ರಾಜ್ಯ ಸರ್ಕಾರದ ಸ್ವಾಮ್ಯ ಒಳಪಟ್ಟಿರುವ ನಿಯಮ, ಮಂಡಳಿಗಳ ಕಚೇರಿಗಳ, ಮತ್ತಿತರ ಸಾರ್ವಜನಿಕ ಮೂಲ ಸೌಕರ್ಯಗಳ ನಿರ್ಮಾಣ, ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಕಸ ಸಂಗ್ರಹಣೆ, ಪ್ರತ್ಯೇಕತೆ ಮತ್ತು ಮರು ಬಳಕೆ ಕೇಂದ್ರಗಳಿಗೆ, ಸಬ್‌ ಸ್ಟೇಷನ್‌ಗಳ, ಟ್ರಾನ್ಸ್‌ಫಾರ್ಮ್‌ಗಳ, ಯಾರ್ಡ್‌ಗಳು, ಮನರಂಜನಾ ಕೇಂದ್ರಗಳು, ಧಾರ್ಮಿಕ, ಸಾಂಸ್ಕೃತಿಕ ಚಟುವಟಿಕೆಗಳ ಕೇಂದ್ರಗಳ ನಿರ್ಮಾಣಕ್ಕೆ ಜಾಗವನ್ನು ಗುತ್ತಿಗೆ ಆಧಾರದ ಮೇಲೆ ಮಂಜೂರು ಮಾಡಲು ಅವಕಾಶವಿದೆ.

 

ಪ್ರಸ್ತಾವ ತಿರಸ್ಕೃತಗೊಳಿಸಿದ್ದೇಕೆ?

 

ನಿಯಮಗಳ ಪ್ರಕಾರ ಕಾಂಗ್ರೆಸ್‌ ಪಕ್ಷದ ಕಾರ್ಯಾಲಯ ಕಟ್ಟಡಕ್ಕೆ 30 ವರ್ಷಗಳ ಅವಧಿಗೆ ಗುತ್ತಿಗೆ ನೀಡಲು ಅವಕಾಶಗಳೇ ಇಲ್ಲ. ಹೀಗಾಗಿ ಈ ಪ್ರಸ್ತಾವನೆಯನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಹೀಗಾಗಿ ಈ ಪ್ರಸ್ತಾವನೆಯನ್ನು ತಿರಸ್ಕರಿಸಲಾಗಿದೆ ಎಂದು ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಉಮಾ ಮಹದೇವನ್‌ ಅವರು ತಿಳಿಸಿದ್ದಾರೆ. ಈ ಕುರಿತು ಸಚಿವ ಪ್ರಿಯಾಂಕ್‌ ಖರ್ಗೆ ಅವರೊಂದಿಗೂ ಚರ್ಚಿಸಿದ್ದಾರೆ ಎಂದು ಗೊತ್ತಾಗಿದೆ.

 

 

ಹಿಂದುಳಿದ ಮತ್ತು ನಾಯಕ  ಜನಾಂಗದವರ ಸ್ಮಶಾನಕ್ಕೆ ಮೀಸಲಿಟ್ಟಿರುವುದು ಮತ್ತು  ಒಕ್ಕಲಿಗರ ಸಮುದಾಯ ಭವನ, ಪೌರ ಕಾರ್ಮಿಕರು, ಸಫಾಯಿ ಕರ್ಮಚಾರಿಗಳಿಗೆ ನಿವೇಶನ, ಮೆಟ್ರಿಕ್‌ ನಂತರದ  ವಿದ್ಯಾರ್ಥಿ ನಿಲಯ ಸ್ಥಾಪನೆ ಸೇರಿದಂತೆ ಇನ್ನಿತರೆ ಸಾರ್ವಜನಿಕ ಉದ್ದೇಶಗಳಿಗಾಗಿ ಕಾಯ್ದಿರಿಸಿದ್ದ ಸರ್ಕಾರಿ ಜಮೀನನ್ನು ಕಾಂಗ್ರೆಸ್‌ ಭವನ ಟ್ರಸ್ಟ್‌ಗೆ ಮಂಜೂರು ಮಾಡಲು ಸಚಿವ ಸಂಪುಟವು ಈಚೆಗಷ್ಟೇ ಅನುಮೋದನೆ ನೀಡಿತ್ತು.

 

https://stack.thefile.in/2025/05/governance/32039/

 

ರಾಜ್ಯದ ನಗರಾಭಿವೃದ್ದಿ ಪ್ರಾಧಿಕಾರಗಳ ವ್ಯಾಪ್ತಿಯಲ್ಲಿನ ಬಡಾವಣೆಗಳಲ್ಲಿ ನಾಗರೀಕ ಸೌಲಭ್ಯಗಳ ಉದ್ದೇಶಗಳಿಗಾಗಿ ಮೀಸಲಿಟ್ಟ ನಿವೇಶನಗಳನ್ನು ಮಂಜೂರು ಮಾಡಿಸಿಕೊಳ್ಳುತ್ತಿರುವ ಕಾಂಗ್ರೆಸ್‌ ಭವನ ಟ್ರಸ್ಟ್‌, ಇದೀಗ ಕಂದಾಯ ಇಲಾಖೆ ವ್ಯಾಪ್ತಿಯಲ್ಲಿನ ಸರ್ಕಾರಿ ಜಮೀನುಗಳನ್ನೂ ಮಂಜೂರು ಮಾಡಿಸಿಕೊಳ್ಳಲು ಹೊರಟಿದೆ. ಅಲ್ಲದೇ  ಸರ್ಕಾರಿ ಜಮೀನು ಮಂಜೂರು ಮಾಡಿಸಿಕೊಳ್ಳಲು ಭೂ ಮಂಜೂರಾತಿ ನಿಯಮಗಳನ್ನೂ ಸಡಿಲಿಸಲು ಸಚಿವ ಸಂಪುಟವು ಒಪ್ಪಿಗೆ ನೀಡಿತ್ತು.

 

ಚಿಕ್ಕಬಳ್ಳಾಪುರ ತಾಲೂಕು ನಂದಿ ಹೋಬಳಿಯ ಅಗಲಕುರ್ಕಿ ಗ್ರಾಮದಲ್ಲಿ ಅನುಮೋದಿತ ಬಡಾವಣೆಯಲ್ಲಿ ನಿವೇಶನ ಕೋರಿದ್ದರು. ಆದರೀಗ ನಗರಾಭಿವೃದ್ದಿ ಇಲಾಖೆಯು  ಸ್ಥಳವನ್ನು ಬದಲಾಯಿಸಿತ್ತು.

 

https://stack.thefile.in/2025/05/governance/31847/

 

ಚಿಕ್ಕಬಳ್ಳಾಪುರ ಜಿಲ್ಲೆಗೆ  ಉಸ್ತುವಾರಿ ಸಚಿವ ಉನ್ನತ ಶಿಕ್ಷಣ ಸಚಿವ ಡಾ ಎಂ ಸಿ ಸುಧಾಕರ್‍‌ ಅವರ ಸೂಚನೆಯಂತೆ ನಗರಾಭಿವೃದ್ದಿ ಇಲಾಖೆಯು ಚಿಕ್ಕಬಳ್ಳಾಪುರ ಜಿಲ್ಲಾ ಕಾಂಗ್ರೆಸ್‌ ಭವನದ ಕಟ್ಟಡ ನಿರ್ಮಾಣಕ್ಕೆ ನಿವೇಶನವನ್ನು ಮಂಜೂರು ಮಾಡಲು ತಯಾರಿ ನಡೆಸಿತ್ತು. ಈ ಕುರಿತು 'ದಿ ಫೈಲ್‌', ಮೇ 5ರಂದೇ ದಾಖಲೆ ಸಹಿತ ವರದಿ ಪ್ರಕಟಿಸಿತ್ತು.

 

https://stack.thefile.in/2025/05/governance/31754/

 

ಹುಬ್ಬಳ್ಳಿ ಧಾರವಾಡ ಮಹಾನಗರಪಾಲಿಕೆ ವ್ಯಾಪ್ತಿ ಮತ್ತು ವಶದಲ್ಲಿರುವ ನಿವೇಶನವನ್ನು ಜಿಲ್ಲಾ ಕಾಂಗ್ರೆಸ್‌ ಭವನ ಕಟ್ಟಡ ನಿರ್ಮಾಣಕ್ಕೆ ಜಮೀನು ಮಂಜೂರು ಮಾಡಲು ಸಚಿವ ಸಂಪುಟವು ಅನುಮೋದಿಸಿತ್ತು.

 

https://stack.thefile.in/2025/02/governance/29927/

 

ಆದರೀಗ ಆರ್ಥಿಕ ಇಲಾಖೆಯು ಹುಬ್ಬಳ್ಳಿ ಧಾರವಾಡ ಮಹಾನಗರಪಾಲಿಕೆಯ ಆಸ್ತಿಯನ್ನು ಮಂಜೂರು ಮಾಡುವ ಪ್ರಸ್ತಾವನೆಯನ್ನು ಸಚಿವ ಸಂಪುಟದ ಮುಂದೆ ಮಂಡಿಸಲು ಒಪ್ಪಿಗೆ ಸೂಚಿಸಿತ್ತು. ಇದರ ಅಭಿಪ್ರಾಯದ ಮೇರೆಗೆ ಸಚಿವ ಸಂಪುಟವೂ 2025ರ ಫೆ.20ರಂದು ನಡೆದ ಸಭೆಯಲ್ಲಿ ಮಂಜೂರು ಮಾಡಿತ್ತು.

 

ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್‌ ಲಾಡ್, ಶಾಸಕ ವಿನಯ್ ಕುಲಕರ್ಣಿ, ಪ್ರಸಾದ್ ಅಬ್ಬಯ್ಯ ಮತ್ತಿತರರು ಈ ಪ್ರಸ್ತಾವನೆಗೆ ಶಿಫಾರಸ್ಸು ಮಾಡಿದ್ದರು.  ಇದನ್ನಾಧರಿಸಿ ಆರ್ಥಿಕ ಇಲಾಖೆಯ ಅಭಿಪ್ರಾಯ ಪಡೆಯಲು ಕಡತವನ್ನು ಪೌರಾಡಳಿತ ಇಲಾಖೆಯು ಕಡತವನ್ನು (DMA/DEV/OTH/285/2024)  ಮಂಡಿಸಿದ್ದರು.

 

https://stack.thefile.in/2025/01/governance/28907/

 

ಕೆಪಿಸಿಸಿಗೆ ಕಾರ್ಯಾಲಯ ಕಚೇರಿ ನಿರ್ಮಾಣ ಮಾಡಲು  ಉದ್ದೇಶಿತ ಆಸ್ತಿಯು ಮಹಾನಗರಪಾಲಿಕೆಯ ಆಸ್ತಿಯಾಗಿದೆ.  ಸರ್ಕಾರವು ನಿಗದಿಪಡಿಸಿರುವ ಮಾರ್ಗಸೂಚಿಗಳ ರೀತಿ ಪಾಲಿಕೆಯ ಆಸ್ತಿಗಳನ್ನು ಕೆಲವು ಉದ್ದೇಶಗಳನ್ನು ಹೊರತುಪಡಿಸಿ ಸಾರ್ವಜನಿಕ ಹರಾಜು ಮೂಲಕ ಮಾರಾಟ ಮಾಡಲು ಅವಕಾಶವಿದೆ. ಈ ಪ್ರಕರಣದಲ್ಲಿಯೂ ಸಾರ್ವಜನಿಕ ಹರಾಜು ಮುಖಾಂತರವೇ ಆಸ್ತಿಯನ್ನು ಹಂಚಿಕೆ ಮಾಡಬೇಕಾಗಿದೆ ಎಂದು ತಿಳಿಸಿತ್ತು.

 

ಆದರೆ ಈ ಪ್ರಸ್ತಾವಿತ ವಿಷಯಕ್ಕೆ ಪಾಲಿಕೆಯ ಕೌನ್ಸಿಲ್‌ ಸಭೆಯಲ್ಲಿ ಅನುಮೋದನೆ ಆಗಿಲ್ಲ. ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್‌ ಲಾಡ್ ಅವರು ಧಾರವಾಡ ಜಿಲ್ಲಾ ಕಾಂಗ್ರೆಸ್‌ ಕಾರ್ಯಾಲಯ ನಿರ್ಮಾಣ ಮಾಡುವ ಸಲುವಾಗಿ ಜಾಗವನ್ನು ಮಂಜೂರು ಮಾಡಲು ಪ್ರಸ್ತಾವನೆ ಸಲ್ಲಿಸಿದ್ದಾರೆ. ಇದಕ್ಕೆ ತಗುಲುವ ವೆಚ್ಚವನ್ನು ಈಗಿನ ಸರ್ಕಾರದ ದರ ಅಥವಾ ಅದಕ್ಕಿಂತ ಕಡಿಮೆ ಬೆಲೆಯನ್ನು ಭರಿಸಲು ಸಿದ್ಧರಿದ್ದೇವೆ ಎಂದು ತಿಳಿಸಿದ್ದರು.

 

ಭಾರತೀಯ ಜನತಾ ಪಾರ್ಟಿಯು ತಾಲೂಕು ಪ್ರದೇಶಗಳಲ್ಲಿ ಸ್ವಂತ ಕಚೇರಿಗಾಗಿ ಕಟ್ಟಡ ನಿರ್ಮಾಣ ಮಾಡಲು ಪರಿಶಿಷ್ಟ ಜಾತಿಯ ಸರ್ಕಾರಿ ವಿದ್ಯಾರ್ಥಿ ನಿಲಯಗಳೂ ಸೇರಿದಂತೆ ಸಾರ್ವಜನಿಕ ಉದ್ದೇಶಕ್ಕೆ ಕಾಯ್ದಿರಿಸಿರುವ ನಿವೇಶನ, ಜಮೀನುಗಳ ಮೇಲೆ ಕಣ್ಣು ಹಾಕಿತ್ತು.

 

https://stack.thefile.in/2022/07/governance/12592/

 

ಪರಿಶಿಷ್ಟ ಜಾತಿಯ ಸರ್ಕಾರಿ ವಿದ್ಯಾರ್ಥಿ ನಿಲಯಗಳ ಕಟ್ಟಡ ನಿರ್ಮಾಣ ಸಂಬಂಧ ಕಾಯ್ದರಿಸಲಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಆಯುಕ್ತರು ವರದಿ ನೀಡಿದ್ದರೂ ಇದೇ ಜಾಗದಲ್ಲಿ ಭಾರತೀಯ ಜನತಾ ಪಕ್ಷದ ಕಚೇರಿ ಕಟ್ಟಡ ನಿರ್ಮಾಣ ಮಾಡಲು ಖಾಲಿ ನಿವೇಶನ ಮಂಜೂರು ಮಾಡಲು ವರದಿ ಸಲ್ಲಿಸಬೇಕು ಎಂದು ನಿರ್ದೇಶಿಸಿದ್ದನ್ನು ಸ್ಮರಿಸಬಹುದು.

 

ಈ ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿಯೂ ರಾಷ್ಟ್ರೋತ್ಥಾನ ಪರಿಷತ್‌, ಜನಸೇವಾ ಟ್ರಸ್ಟ್‌ ಸೇರಿದಂತೆ ಸಂಘ ಪರಿವಾರದ ಇನ್ನಿತರೆ ಸಂಘ ಸಂಸ್ಥೆಗಳಿಗೂ ಗೋಮಾಳ, ಸರ್ಕಾರಿ ಜಮೀನು, ಬಿ ಖರಾಬು ಜಮೀನುಗಳನ್ನು ಚಿಲ್ಲರೆ ದರದಲ್ಲಿ ಮಂಜೂರು ಮಾಡಿತ್ತು.

 

https://stack.thefile.in/2022/08/governance/12839/

 

ಇದೀಗ ಕಾಂಗ್ರೆಸ್‌ ಸರ್ಕಾರವು ಸಹ ಜಿಲ್ಲಾ ಕೇಂದ್ರಗಳಲ್ಲಿ ಕಾಂಗ್ರೆಸ್‌ ಭವನಗಳಿಗೆ ಕಟ್ಟಡ ನಿರ್ಮಾಣಕ್ಕೆ ನಗರಾಭಿವೃದ್ಧಿ ಪ್ರಾಧಿಕಾರಗಳ ಅಧೀನದಲ್ಲಿ ಮತ್ತು ನಾಗರಿಕ ಸೌಲಭ್ಯಗಳಿಗೆಂದು ಮೀಸಲಿರಿಸಿರುವ ನಿವೇಶನಗಳ ಮೇಲೆ ಕಣ್ಣು ಹಾಕಿರುವುದು ಸಾರ್ವಜನಿಕ ವಲಯದಲ್ಲಿ ಟೀಕೆಗೆ ಗುರಿಯಾಗಿದೆ.

Tags: AuthorityBasanagoudabengaluruBhavanacongressCORPORATIONCourtD K ShivakumarDaksinaDevelopmentDR G ParameshwarDumpingHobaliKasabaLitigationMahangaraMaraluruMedicle CollegeMulugundOriginalOwnershipPalikePatilr ashokrevenueSiddaramaiahaSiddarthaSolidStreetSuitSweepingTrustTrutTumakuruUrbanVijyayaVillageWasteYatnalಆರ್‌ ಅಶೋಕ್‌ಕಸಕಾಏಜುಕಾಂಗ್ರೆಸ್‌ಕಾರ್ಪೋರೇಷನ್‌ಕಾಲೇಜುಗಾಂಧಿಗೃಹ ಸಚಿವಗ್ರಾಮೀಣಾಭಿವೃದ್ದಿಘನ ತ್ಯಾಜ್ಯಚಿಲ್ಲರೆಜನಸೇವಾ ಟ್ರಸ್ಟ್‌ಜಮೀನುಟ್ರಸ್ಟ್‌ಡಾ ಜಿ ಪರಮೇಶ್ವರ್‌ಡಿ ಕೆ ಶಿವಕುಮಾರ್ತುಮಕೂರುದರನಗರಾಭಿವೃದ್ಧಿಪರಿಷತ್‌ಪಾಟೀಲಪಾಲಿಕೆಬಸನಗೌಡಬಿ ವೈ ವಿಜಯೇಂದ್ರಬಿ ವೈ ವಿಜಯೇಂಧ್ರಭವಭವನಮರಳೂರುಮಹಾನಗರಪಾಲಿಕೆಮಾರುಕಟ್ಟೆಮುನಿಸಿಪಾಲಿಟಿಮುನ್ಸಿಪಾಲ್ಟಿಮೆಡಿಕಲ್‌ಯತ್ನಾಳರಾಜೀವ್‌ರಾಷ್ಟ್ರೋತ್ಥಾನರಿಯಲ್‌ ಎಸ್ಟೇಟ್‌ರೂರಲ್‌ ಡೆವಲಪ್‌ಮೆಂಟ್ಸಂಘಸಂಘ ಪರಿವಾರಸಿದ್ದರಾಮಯ್ಯಸಿದ್ದಾರ್ಥ
Advertisement Banner
Previous Post

15.59 ಲಕ್ಷ ಫಲಾನುಭವಿಗಳ 12.68 ಲಕ್ಷ ಪಡಿತರ ಚೀಟಿಗಳ ಮೇಲೆ ತೂಗುಗತ್ತಿ

Next Post

ಎರಡು ವರ್ಷಗಳಲ್ಲಿ 2,747 ಎಕರೆ ಕೃಷಿ ಭೂಮಿ ಪರಿವರ್ತನೆ; ಧಾರವಾಡ ಜಿಲ್ಲೆಯಲ್ಲಿಯೇ ಅತಿಹೆಚ್ಚು

thefilestack

thefilestack

Next Post
agricultural land conversion

ಎರಡು ವರ್ಷಗಳಲ್ಲಿ 2,747 ಎಕರೆ ಕೃಷಿ ಭೂಮಿ ಪರಿವರ್ತನೆ; ಧಾರವಾಡ ಜಿಲ್ಲೆಯಲ್ಲಿಯೇ ಅತಿಹೆಚ್ಚು

Recommended

ಅಕ್ರಮ ಗಣಿಗಾರಿಕೆಯಲ್ಲಿ ಅಕ್ರಮ ಸಂಭಾವನೆ ಪಡೆದ ಆರೋಪಿ ಅಧಿಕಾರಿ, ಈಗ ಗಣಿ ಸಚಿವರ ಆಪ್ತ ಕಾರ್ಯದರ್ಶಿ

3 years ago

‘ಮಿನಿಸ್ಟರ್‌, ಅಧ್ಯಕ್ಷರಿಗೆ ಹಣ ಕೊಡಬೇಕು,’; ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ ಲಂಚಕ್ಕೆ ಬೇಡಿಕೆ

4 years ago

Don't Miss

ಕಾಂಗ್ರೆಸ್‌ ಸರ್ಕಾರದಿಂದ ‘ಕಾಂಗ್ರೆಸ್‌ ಭವನ ಟ್ರಸ್ಟ್‌’ಗೆ ಸರ್ಕಾರಿ ಜಾಗ; ಹಿತಾಸಕ್ತಿ ಸಂಘ‍ರ್ಷದ ಸುಳಿಯಲ್ಲಿ ಸಿಎಂ, ಡಿಸಿಎಂ

August 18, 2025

70 ಹುದ್ದೆಗಳಿಗೆ ನೇಮಕ; ಆದೇಶ ನೇರಾನೇರ ಉಲ್ಲಂಘನೆ, ರಾಜ್ಯಪಾಲರ ಕಚೇರಿಯ ಜಾಣ ಕುರುಡು ಬಯಲು

August 18, 2025

ಗೃಹಲಕ್ಷ್ಮಿ ವೆಚ್ಚಕ್ಕೂ ಜಿಎಸ್‌ಟಿ ಕೊಡುಗೆಗೂ ಅಜಗಜಾಂತರ; ಹಣಕಾಸು ಹೊಣೆಗಾರಿಕೆ ಸೃಷ್ಟಿಸಿತೇ?

August 16, 2025

ಕಲ್ಯಾಣ ಕರ್ನಾಟಕದಲ್ಲಿ ಪಿಡಬ್ಲ್ಯೂಡಿ ಇಲಾಖೆಯ ಆರು ಅಧಿಕಾರಿಗಳ ಮೇಲೆ ಲೋಕಾಯುಕ್ತ ದಾಳಿ; ಮೂವರು ಮಾತ್ರ ಅಮಾನತು

August 14, 2025
the file

THE FILE is run by the File Stack Media Private Limited. It is founded and edited by G Mahantesh, a veteran investigative journalist who has worked in the past for mainstream news television, broadsheet newspapers and digital ventures.

Follow us

Recent News

ಕಾಂಗ್ರೆಸ್‌ ಸರ್ಕಾರದಿಂದ ‘ಕಾಂಗ್ರೆಸ್‌ ಭವನ ಟ್ರಸ್ಟ್‌’ಗೆ ಸರ್ಕಾರಿ ಜಾಗ; ಹಿತಾಸಕ್ತಿ ಸಂಘ‍ರ್ಷದ ಸುಳಿಯಲ್ಲಿ ಸಿಎಂ, ಡಿಸಿಎಂ

August 18, 2025

70 ಹುದ್ದೆಗಳಿಗೆ ನೇಮಕ; ಆದೇಶ ನೇರಾನೇರ ಉಲ್ಲಂಘನೆ, ರಾಜ್ಯಪಾಲರ ಕಚೇರಿಯ ಜಾಣ ಕುರುಡು ಬಯಲು

August 18, 2025

Categories

  • Blog
Support Us
  • About
  • Advertise
  • Privacy & Policy
  • Contact

© THE FILE 2026 All Rights Reserved by File Stack Media Private Limited. Designed by Kalahamsa infotech Pvt.Ltd

No Result
View All Result
  • Home
  • CBI/CID
  • RTI
  • GOVERNANCE
  • IT/ED
  • LEGISLATURE
  • LOKAYUKTA
  • About Us
  • Contact Us
  • Kannada Version

© THE FILE 2026 All Rights Reserved by File Stack Media Private Limited. Designed by Kalahamsa infotech Pvt.Ltd